×
Ad

ಗುರುಪುರ ಸೇತುವೆ ‘ಕಟ್ಟಡ ರಚನೆ’ ಧಾರಣಾ ಸಾಮರ್ಥ್ಯ ಸಮೀಕ್ಷೆ ಆರಂಭ

Update: 2020-08-26 20:12 IST

ಮಂಗಳೂರು, ಆ.26: ಗುರುಪುರದ ಫಲ್ಗುಣಿ ನದಿಗೆ ನಿರ್ಮಿಸಲಾದ ಹೊಸ ಸೇತುವೆಯ ‘ಕಟ್ಟಡ ರಚನೆ’ ಹಾಗೂ ಸೇತುವೆಯ ಎರಡೂ ಪಾರ್ಶ್ವದಲ್ಲಿ ಅಗಲೀಕರಣಗೊಂಡ ತಲಾ 500 ಮೀಟರ್ ರಸ್ತೆಯಲ್ಲಿ ನಿರ್ಮಿಸಲಾದ ಬೃಹತ್ ಮೋರಿಗಳ ಧಾರಣಾ ಸಾಮರ್ಥ್ಯ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಮಂಗಳೂರು ಕಚೇರಿ ಅಧಿಕಾರಿಗಳ ತಂಡ ನಿಯೋಜಿಸಲ್ಪಟ್ಟ ಖಾಸಗಿ ಕನ್‌ಸಲ್ಟೆನ್ಸಿ ಕಂಪೆನಿಯೊಂದರ ತಜ್ಞರ ತಂಡವು ಅತ್ಯಾಧುನಿಕ ತಂತ್ರಜ್ಞಾನವುಳ ಉಪಕರಣಗಳ ಮೂಲಕ ಸೇತುವೆ ಕಟ್ಟಡದ ಧಾರಣಾ ಸಾಮರ್ಥ್ಯ ದಾಖಲೀಕರಿಸಿದೆ. ಈ ತಂಡವು ಆ.25ರಂದು ಸೇತುವೆ ಮೇಲೆ ಹಾಗೂ ಬೋಟ್ ಬಳಸಿಕೊಂಡು ಸೇತುವೆಯ ಪಿಲ್ಲರುಗಳ ಪರೀಕ್ಷೆ ನಡೆಸಿದೆ. ಬುಧವಾರ ಆ.26ರಂದು ವಿಸ್ತರಣೆಗೊಂಡ ರಸ್ತೆ ಹಾಗೂ ಮೋರಿಗಳ ಪರೀಕ್ಷೆ ಮುಂದುವರಿಸಿದೆ.

ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) ವಿಭಾಗದ ಕಾರ್ಯನಿರ್ವಹಣಾ ಇಂಜಿನಿಯರ್ (ಇಇ) ಜಿ ಎನ್ ಹೆಗ್ಡೆ, ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್(ಎಇಇ) ರಮೇಶ್ ಹಾಗೂ ಸಹಾಯಕ ಇಂಜಿನಿಯರ್(ಎಇ) ಮುರುಗೇಶ್ ಅವರನ್ನೊಳಗೊಂಡ ಅಧಿಕಾರಿಗಳು ತಂಡದ ಮೇಲುಸ್ತುವಾರಿ ನಡೆಸುತ್ತಿದ್ದಾರೆ. ಸೇತುವೆ ನಿರ್ಮಾಣದ ಖಾಸಗಿ ಗುತ್ತಿಗೆದಾರ ಕಂಪೆನಿಯಾದ ಮೊಗರೋಡಿ ಕನ್‌ಸ್ಟ್ರಕ್ಷನ್‌ನ ಇಂಜಿನಿಯರು ಹಾಗೂ ಸಿಬ್ಬಂದಿ ವರ್ಗ ಸಮೀಕ್ಷೆಗೆ ಸಹಕರಿಸುತ್ತಿದೆ.

‘ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ನಿರ್ಮಿಸಲಾದ ಈ ಹೊಸ ಸೇತುವೆ ಕಟ್ಟಡದ ಧಾರಣಾ ಸಾಮರ್ಥ್ಯ ಉತ್ತಮವಾಗಿದೆ. ಸಮೀಕ್ಷೆಯ ಅಂತಿಮ ವರದಿಯನ್ನು ಎನ್‌ಎಚ್‌ಐಗೆ ನೀಡಲಾಗುವುದು’ ಎಂದು ಸಮೀಕ್ಷೆ ನಡೆಸಿದ ತಂಡದ ಖಾಸಗಿ ಕಂಪೆನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News