ನೀಟ್, ಜೆಇಇ ಪರೀಕ್ಷೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಮಮತಾ ಬ್ಯಾನರ್ಜಿ ಸಲಹೆ

Update: 2020-08-26 16:13 GMT

ಹೊಸದಿಲ್ಲಿ, ಆ.26: ಕೊರೋನ ಸೋಂಕಿನ ಮಧ್ಯೆಯೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸೆಪ್ಟೆಂಬರ್‌ನಲ್ಲಿ ನಡೆಸುವ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 7 ರಾಜ್ಯದ ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಿಎಸ್‌ಟಿಯಲ್ಲಿ ರಾಜ್ಯದ ಅಂಶ(ಭಾಗ)ವನ್ನು ಇನ್ನೂ ಬಿಡುಗಡೆ ಮಾಡದಿರುವುದಕ್ಕೆ ಅಸಮಾಧಾನ ಸೂಚಿಸಿದ್ದಾರೆ.

ಜೆಇಇ ಮತ್ತು ನೀಟ್ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಎಲ್ಲಾ ರಾಜ್ಯಗಳೂ ಸೇರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲಹೆ ಮಾಡಿದ್ದಾರೆ.

ಗುರುವಾರ ನಡೆಯಲಿರುವ ಜಿಎಸ್‌ಟಿ ಸಮಿತಿ ಸಭೆಗೂ ಮುನ್ನ ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ , ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಪಾಲ್ಗೊಂಡಿದ್ದರು.

ಆರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಶಿಕ್ಷಣ ನೀತಿಯಂತಹ ನಿರ್ಧಾರಗಳು ದೇಶದ ಜಾತ್ಯಾತೀತ ಸಿದ್ಧಾಂತದ ವಿರುದ್ಧವಾಗಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರಕಾರ ಸಂವೇದನಾರಹಿತ ನಿಲುವು ತಳೆದಿದೆ. ವಿಪಕ್ಷಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ವರ್ಷ ರಾಜ್ಯ ಸರಕಾರಗಳಿಗೆ ಸಲ್ಲಬೇಕಿರುವ 14% ಜಿಎಸ್‌ಟಿ ಪಾಲನ್ನು ಪಾವತಿಸಲು ಅಸಾಧ್ಯ ಎಂದು ಆಗಸ್ಟ್ 11ರಂದು ವಿತ್ತ ಕಾರ್ಯದರ್ಶಿ ಹೇಳಿದ್ದಾರೆ.

ಇದು ಮೋದಿ ಸರಕಾರದ ವಿಶ್ವಾಸದ್ರೋಹಕ್ಕೆ ಮತ್ತೊಂದು ನಿದರ್ಶನ ಎಂದರು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವೆಂಟಿಲೇಟರ್, ಪಿಪಿಇ ಕಿಟ್‌ಗಳು ಮುಂತಾದ ಅಗತ್ಯ ವಸ್ತುಗಳನ್ನು ಒದಗಿಸಲು ರಾಜ್ಯ ಸರಕಾರ ಬೃಹತ್ ಮೊತ್ತವನ್ನು ವ್ಯಯಿಸುತ್ತಿದೆ. ಸಿಬಂದಿಗಳಿಗೆ ವೇತನ ಪಾವತಿಸಲೂ ಕಷ್ಟವಾಗುತ್ತಿದೆ. ಆದರೆ ಕೇಂದ್ರ ಸರಕಾರ ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಸಂದಾಯವಾಗಬೇಕಿರುವ ಪಾಲನ್ನು ನೀಡುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದರು.

ಜೂನ್‌ನಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಆಗಲಿಲ್ಲ. ಈಗ ಪರೀಕ್ಷೆ ನಡೆಸುವುದು ಸರಿಯಲ್ಲ . ರಾಜ್ಯ ಸರಕಾರಗಳ ಅಗತ್ಯವೇ ಇಲ್ಲ ಎಂಬಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ನಮ್ಮ ಸಂವಿಧಾನದಲ್ಲಿ ಗಣರಾಜ್ಯ ವ್ಯವಸ್ಥೆಗೆ ಅವಕಾಶ ನೀಡಿದ್ದರೂ, ಒಬ್ಬ ವ್ಯಕ್ತಿ ಎಲ್ಲವನ್ನೂ ನಿಯಂತ್ರಿಸುವ ಪರಿಸ್ಥಿತಿಯತ್ತ ದೇಶ ಹೊರಳುತ್ತಿದೆ. ಕೇಂದ್ರ ಸರಕಾರಕ್ಕೆ ಹೆದರಿ ಸುಮ್ಮನಿರಬೇಕೇ ಅಥವಾ ಹಕ್ಕುಗಳಿಗಾಗಿ ಹೋರಾಡಬೇಕೇ ಎಂಬುದನ್ನು ರಾಜ್ಯಗಳು ನಿರ್ಧರಿಸುವ ಕಾಲ ಬಂದಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೊರೋನ ಸೋಂಕು ಪರಾಕಾಷ್ಟೆಗೆ ತಲುಪಿರುವ ಈ ಸಂದರ್ಭದಲ್ಲಿ ನೀಟ್, ಜೆಇಇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಕುಟುಂಬದ ಸದಸ್ಯರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳುವುದರಿಂದ ಸೋಂಕು ಹರಡುವ ಅಪಾಯವಿದೆ. ಆದ್ದರಿಂದ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದರು. ಲಾಕ್‌ಡೌನ್‌ನಿಂದ ಹಲವು ತಿಂಗಳು ಆರ್ಥಿಕ ಚಟುವಟಿಕೆಗೆ ನಿರ್ಬಂಧವಿದ್ದ ಕಾರಣ ರಾಜ್ಯಗಳು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಆದರೆ ಕೇಂದ್ರ ಸರಕಾರ ರಾಜ್ಯಗಳಿಗೆ ದೊರಕಬೇಕಿರುವ ಜಿಎಸ್‌ಟಿ ಮೊತ್ತವನ್ನು ಇನ್ನೂ ಪಾವತಿಸಿಲ್ಲ. ಅಲ್ಲದೆ ತೈಲ ಬೆಲೆಯೇರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ಸೊರೇನ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೊರೋನ ವೈರಸ್ ಸೋಂಕಿನ ಬಿಕ್ಕಟ್ಟನ್ನು ನಿರ್ವಹಿಸಲು ಪಂಜಾಬ್ ಸರಕಾರ ಇದುವರೆಗೆ 500 ಕೋಟಿ ರೂ. ವೆಚ್ಚ ಮಾಡಿದೆ. 30 ಕೋಟಿ ರೂ. ನೀಡುವುದಾಗಿ ಕೇಂದ್ರ ಸರಕಾರ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ರಾಜ್ಯಗಳಿಗೆ ಜಿಎಸ್‌ಟಿಯ ಭಾಗವನ್ನು ಪಾವತಿಸದಿರುವ ಕಾರಣ ರಾಜ್ಯಗಳ ಖಜಾನೆ ಬರಿದಾಗುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News