×
Ad

ಪುತ್ತೂರು: ಬಿಜೆಪಿ ಕಾರ್ಯಕರ್ತರ ಸಮಾವೇಶ

Update: 2020-08-26 21:51 IST

ಪುತ್ತೂರು : ಬಿಜೆಪಿಯು ಪ್ರಸ್ತುತ ಸುವರ್ಣ ಯುಗದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಸೂಪರ್ ಪವರ್ ಆಗಿ ಮೂಡಿಬರುತ್ತಿದೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಬುಧವಾರ ನಗರದ ಕೋ-ಆಪರೇಟಿವ್ ಟೌನ್‍ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪುತ್ತೂರು ನಗರಮಂಡಲ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕೊರೋನ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರಕಾರ ಅದ್ಭುತ ಕೆಲಸ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ `ಸೇವಾ ಹಿ ಸಂಘಟನ್' ಚಿಂತನೆಯ ಆಧಾರದಲ್ಲಿ ಕೊರೋನಾ ಲಾಕ್‍ಡೌನ್ ವೇಳೆ ಮಾನವೀಯ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ ಎಂದರು. 

ಕಾಂಗ್ರೆಸ್ ಪಕ್ಷವು ಅವನತಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದ್ದು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ನಲ್ಲಿ ಯಾರು ಅಧ್ಯಕ್ಷರು ಎಂಬ ಕುರಿತು ತೀರ್ಮಾನ ತೆಗೆದುಕೊಳ್ಳಲಾಗದ ಪರಿಸ್ಥಿತಿ ಉದ್ಭವಿಸಿದೆ. ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಗಮನಿಸುವಾಗ ಕಾಂಗ್ರೆಸ್ ಮುಕ್ತ ಭಾರತ ಖಚಿತವಾಗಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ಕೆ.ಜಿ. ಹಳ್ಳಿ ಮತ್ತು ಡಿ.ಜೆ ಹಳ್ಳಿ ಡೊಂಬಿಯಲ್ಲಿ ಕೇವಲ ಎಸ್‍ಡಿಪಿಐ ಪಾತ್ರ ಮಾತ್ರವಲ್ಲ ಕಾಂಗ್ರೆಸ್‍ನ ಎರಡು ಬಣಗಳ ಪಾತ್ರವಿದೆ. ಆದ ಕಾರಣವೇ ಕಾಂಗ್ರೆಸ್ ಪ್ರಕರಣದ ತನಿಖೆಯ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. 

ಸಮಾವೇಶವನ್ನು ಉದ್ಘಾಟಿಸಿದ ರಾಜ್ಯ ಪೌರಾಡಳಿತ ಸಚಿವ ಡಾ. ಕೆ.ಸಿ. ನಾರಾಯಣ ಗೌಡ, ಬಿಜೆಪಿಗೆ ಸೇರಿದ ಬಳಿಕ ನನಗೆ ರಾಜಕೀಯವಾಗಿ ಶಕ್ತಿ ಬಂದಿದೆ. ನನ್ನ ತವರು ಜಿಲ್ಲೆ ಮಂಡ್ಯವನ್ನು ಪಕ್ಷ ಮತ್ತು ಸಂಘಪರಿವಾರದ ಮಾರ್ಗದರ್ಶನದಲ್ಲಿ ಬಿಜೆಪಿಯ ಭದ್ರ ಕೋಟೆಯಲ್ಲಿ ಪರಿವರ್ತಿಸುತ್ತೇನೆ ಎಂದರು.

ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಜಯಂತಿ ನಾಯಕ್, ಮಾಜಿ ಶಾಸಕಿ ಮಲಿಕಾ ಪ್ರಸಾದ್, ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರಮಂಡಲ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಸ್ವಾಗತಿಸಿದರು.  ನಗರಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ವಂದಿಸಿದರು. ಮಾಜಿ ಪುರಸಭಾಧ್ಯಕ್ಷ  ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News