ಮಳೆ ಕಡಿಮೆಯಾದ ತಕ್ಷಣ ಹೆದ್ದಾರಿ ದುರಸ್ತಿ ಕಾಮಗಾರಿ ಆರಂಭ : ಸಂಸದ ನಳಿನ್
ಪುತ್ತೂರು : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಳೆಯ ಕಾರಣದಿಂದ ಹಲವು ಕಡೆಗಳಲ್ಲಿ ಹೊಂಡ ಗುಂಡಿಗಳು ನಿರ್ಮಾಣ ಗೊಂಡಿದ್ದು, ಮಳೆ ಕಡಿಮೆಗೊಂಡ ತಕ್ಷಣವೇ ಅವುಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬುಧವಾರ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಸುರಿಯುವ ಬಾರೀ ಮಳೆಯಿಂದಾಗಿ ಹೆದ್ದಾರಿಗಳ ಕೆಲವು ಕಡೆಗಳಲ್ಲಿ ಹೊಂಡ ಗುಂಡಿಗಳಾಗಿವೆ. ಅವುಗಳನ್ನು ಮಳೆ ಕಡಿಮೆಯಾದ ತಕ್ಷಣವೇ ದುರಸ್ತಿ ಮಾಡುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆಗೆ ಡಾಮರೀಕರಣ ಮಾಡುವ ಎಲ್ಲಾ ಪ್ಲಾಂಟ್‍ಗಳು ಸೆಪ್ಟೆಂಬರ್ ಬಳಿಕವೇ ಕಾರ್ಯಾಚರಣೆ ನಡೆಸುವುದರಿಂದ ಆ ತನಕ ಮರು ಡಾಮರೀಕರಣ ಮಾಡುವುದು ಸಾಧ್ಯವಿಲ್ಲ ಎಂದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ. ರೋಡ್‍ನಿಂದ ಅಡ್ಡಹೊಳೆ ವರೆಗಿನ ಹೆದ್ದಾರಿಯನ್ನು ಚತುಷ್ಪಥ ಮಾಡುವ ಕಾಮಗಾರಿ ಕೆಲವು ಕಾನೂನಾತ್ಮಕ ಸಮಸ್ಯೆಯಿಂದ ನಿಂತಿದೆ. ಇದೀಗ ಮತ್ತೆ ಮರು ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿಯೇ ಈ ಕಾಮಗಾರಿಯೂ ಆರಂಭಗೊಳ್ಳಲಿದೆ ಎಂದು ತಿಳಿಸಿದರು.