×
Ad

ಬಂಟ್ವಾಳ ಪುರಸಭೆ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ : ಸಚಿವ ಡಾ. ನಾರಾಯಣ ಗೌಡ

Update: 2020-08-26 22:29 IST

ಬಂಟ್ವಾಳ, ಆ.26: ಬಂಟ್ವಾಳ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದರೊಂದಿಗೆ, ಅಭಿವೃದ್ಧಿ ಯೋಜನೆಗೆ ನೆರವು ನೀಡುವುದರ ಸಹಿತ ಆಡಳಿತವನ್ನು ಚುರುಕಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ, ಶೀಘ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯುವ ವಿಶ್ವಾಸವಿದೆ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಅವರು, ಬಂಟ್ವಾಳಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜೊತೆಗೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂದೆ ಯಾರೂ ಕೂಡ ಸರಕಾರದ ಮೀಸಲಾತಿಯನ್ನು ಪ್ರಶ್ನಿಸದಂತೆ ಮುಖ್ಯಮಂತ್ರಿ ಕ್ಯಾಬಿನೆಟ್ನ ಉಪಸಮಿತಿಯನ್ನು ಮಾಡಿ ಅದರ ನಿರ್ಣಯವನ್ನು ಹೈಕೋರ್ಟ್ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದವರು ಹೇಳಿದರು. 

ಬಂಟ್ವಾಳ ಪುರಸಭೆಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ನೀಡಿದ ಸಲಹೆಯನ್ನು ಗಮನದಲ್ಲಿರಿಸಲಾಗಿದೆ. ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಗಮನ ಸೆಳೆದಿದ್ದು, ಇದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರಯತ್ನಗಳು ಸಾಗಿದ್ದು, ಅದೇ ವೇಳೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಆಡಳಿತ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.

ಇದೇ ವೇಳೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ತೋಟಗಾರಿಕಾ ಇಲಾಖೆ ಜಮೀನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದವರು ಮಾಹಿತಿ ನೀಡಿದರು. ಅಡಕೆ ಬೆಳೆ ಸಹಿತ ಪ್ರಾಕೃತಿಕ ವಿಕೋಪವುಂಟಾದಾಗ ತೋಟಗಾರಿಕೆ ಬೆಳೆಗಳಿಗೆ ದೊರಕುವ ಪರಿಹಾರ ಮೊತ್ತ ಏರಿಸುವ ಕುರಿತು ಗಮನಹರಿಸುವುದಾಗಿ ಅವರು ತಿಳಿಸಿದರು.

ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭೆ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಪ್ರಮುಖರಾದ ದೇವಪ್ಪ ಪೂಜಾರಿ, ಪ್ರಕಾಶ್ ಅಂಚನ್, ಉದಯಕುಮಾರ ರಾವ್, ಪುರುಷೋತ್ತಮ ಶೆಟ್ಟಿ, ಸುದರ್ಶನ ಬಜ, ಪ್ರಭಾಕರ ಪ್ರಭು, ಡಿವೈಎಸ್ಪಿ ವೆಲಂಟೈನ್ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News