ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಆನ್‌ಲೈನ್ ಆರೋಗ್ಯ ವೃತ್ತಿ ಶಿಕ್ಷಣ, ತರಬೇತಿ ಕೇಂದ್ರ ಆರಂಭ

Update: 2020-08-26 17:30 GMT

ಅಜ್ಮಾನ್, ಆ. 26: ಜಗತ್ತಿನಾದ್ಯಂತ ಆರೋಗ್ಯ ವೃತ್ತಿಪರರು, ವ್ಯಕ್ತಿಗಳು ಹಾಗೂ ಸಮುದಾಯಗಳಿಗೆ ಜಾಗತಿಕ ಮಟ್ಟದ ಆರೋಗ್ಯ ಶಿಕ್ಷಣ ವಿಸ್ತರಿಸುವ ಗುರಿಯೊಂದಿಗೆ ಅಜ್ಮಾನ್‌ನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಜಿಎಂಯು)ದ ಟ್ರಸ್ಟಿಗಳ ಮಂಡಳಿ ಆನ್‌ಲೈನ್ ಆರೋಗ್ಯ ವೃತ್ತಿ ಶಿಕ್ಷಣ ಹಾಗೂ ತರಬೇತಿ ನೀಡಲು ನೂತನ ಕೇಂದ್ರವೊಂದನ್ನು ಆರಂಭಿಸಿದೆ. 

ಈ ನೂತನ ಕೇಂದ್ರಕ್ಕೆ ಭಾರತದ ಹೆಸರಾಂತ ಉದ್ಯಮಿ, ದಾನಿ, ಬಿಎ ಸಮೂಹ ಇಂಡಿಯಾದ ಸ್ಥಾಪಕ, ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಸ್ಥಾಪಕ ಹಾಗೂ ಟ್ರಿಸ್ಟಿಗಳ ಮಂಡಳಿಯ ಅಧ್ಯಕ್ಷರಾಗಿದ್ದ ದಿವಂಗತ ಡಾ. ಬಿ. ಅಹ್ಮದ್ ಹಾಜಿ ಮೊಯ್ದಿನ್ ಅವರ ಗೌರವಾರ್ಥ ‘ಬಿ.ಎ. ಸೆಂಟರ್ ಫಾರ್ ಆನ್‌ಲೈನ್ ಹೆಲ್ತ್ ಪ್ರೊಫೆಶನ್ಸ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್’ ಎಂದು ಹೆಸರಿಡಲಾಗಿದೆ.

ನೂತನ ಕೇಂದ್ರದ ಬಗ್ಗೆ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಜಿಎಂಯು)ದ ಸ್ಥಾಪಕ, ಟ್ರಸ್ಟಿಗಳ ಮಂಡಳಿ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಮಾತನಾಡಿ, ಆರೋಗ್ಯ ಸೇವೆಯ ವೃತ್ತಿಪರರಲ್ಲಿ ಕೌಶಲ ಹಾಗೂ ಜ್ಞಾನ ವೃದ್ಧಿಸಲು ಹಾಗೂ ಜಗತ್ತಿನ ವಿವಿಧ ಭಾಗಗಳಲ್ಲಿ ಆರೋಗ್ಯ ಫಲಿತಾಂಶ ಸುಧಾರಿಸುವ ಉದ್ದೇಶ ದೊಂದಿಗೆ ಬಿಎ ಸೆಂಟರ್ ಫಾರ್ ಆನ್‌ಲೈನ್ ಹೆಲ್ತ್ ಪ್ರೊಫೆಶನ್ಸ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ ಅನ್ನು ಆರಂಭಿಸಲಾಗಿದೆ ಎಂದರು.

ವೈದ್ಯಕೀಯ ಹಾಗೂ ಆರೋಗ್ಯ ವೃತ್ತಿಪರ ಶಿಕ್ಷಣಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಈ ಕೇಂದ್ರಕ್ಕೆ ಡಾ. ಬಿ. ಅಹ್ಮದ್ ಹಾಜಿ ಮೊಯ್ದಿನ್ ಅವರ ಹೆಸರು ಇಡಲಾಗಿದೆ ಎಂದು ಅವರು ತಿಳಿಸಿದರು.

ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಟ್ರಸ್ಟಿಗಳ ಮಂಡಳಿಯ ಸದಸ್ಯ-ಕಾರ್ಯದರ್ಶಿ ಪ್ರೊ. ಹೊಸಮ್ ಹಮ್ದಿ ಮಾತನಾಡಿ, ವಿಶ್ವದಾದ್ಯಂತ ಇರುವ ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು, ವ್ಯಕ್ತಿಗಳಿಗೆ ಹಲವು ಸರ್ಟಿಫಿಕೇಟ್ ಕೋರ್ಸ್ ಮೂಲಕ ಆನ್‌ಲೈನಲ್ಲಿ ವೃತ್ತಿ ಶಿಕ್ಷಣವನ್ನು ಈ ಕೇಂದ್ರ ನೀಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News