×
Ad

ಲಡಾಖ್ ನಲ್ಲಿ 1962ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ: ಚೀನಾ ಜತೆಗಿನ ಸಂಘರ್ಷದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್

Update: 2020-08-27 14:45 IST

ಹೊಸದಿಲ್ಲಿ: “ಪೂರ್ವ ಲಡಾಖ್ ‍ನಲ್ಲಿ ಇನ್ನೂ ಇತ್ಯರ್ಥವಾಗದ ಚೀನಾ ಜತೆಗಿನ ಗಡಿ ಸಮಸ್ಯೆಯು ಖಂಡಿತವಾಗಿಯೂ 1962ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ'' ಎಂದು  ಆ ವರ್ಷ ನಡೆದ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

“45 ವರ್ಷಗಳ ನಂತರ ಗಡಿಯಲ್ಲಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.  ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಎರಡೂ ಕಡೆಗಳಲ್ಲಿ ಹಿಂದೆಂದೂ ಕಂಡಿರದಷ್ಟು ಸೇನೆಯ ಜಮಾವಣೆಯಾಗಿದೆ'' ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

“ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದವು ಈ ಎರಡು ನೆರೆಹೊರೆಯ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಆಧಾರವಾಗಿದೆ ಎಂದು ಭಾರತ ಈಗಾಗಲೇ ಚೀನಾಗೆ ಸ್ಪಷ್ಟವಾಗಿ ತಿಳಿಸಿದೆ'' ಎಂದೂ ಅವರು ಹೇಳಿದ್ದಾರೆ.

“ಕಳೆದ ಮೂರೂವರೆ ತಿಂಗಳಿಗೂ ಹೆಚ್ಚು ಸಮಯದಿಂದ ಹಲವಾರು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳ ಹೊರತಾಗಿಯೂ ಉದ್ವಿಗ್ನತೆ ಇನ್ನೂ ಮುಂದುವರಿದಿದೆ. ಹಿಂದೆ ಗಡಿ ಸಮಸ್ಯೆಗಳು ಮಾತುಕತೆಗಳ ಮೂಲಕ ಪರಿಹಾರವಾಗುತ್ತಿದ್ದವು. ಕಳೆದೊಂದು ದಶಕದಲ್ಲಿ ದೆಪ್ಸಾಂಗ್, ಚುಮರ್, ದೋಕ್ಲಂ ಹೀಗೆ ಪ್ರತಿಯೊಂದೂ ಭಿನ್ನವಾಗಿದ್ದರೂ ಎಲ್ಲಾ ವಿವಾದಗಳು ಮಾತುಕತೆಗಳ ಮೂಲಕ ಇತ್ಯರ್ಥಗೊಂಡಿದ್ದವು'' ಎಂದು ಅವರು ಹೇಳಿದರು.

``ದಿ ಇಂಡಿಯಾ ವೇ : ಸ್ಟ್ರ್ಯಾಟಜೀಸ್ ಫಾರ್ ಆ್ಯನ್ ಅನ್‍ ಸರ್ಟೆನ್ ವರ್ಲ್ಡ್ಸ್' ಎಂಬ ಅವರ ಕೃತಿ ಬಿಡುಗಡೆಗೆ ಮುಂಚಿತವಾಗಿ ಈ ಸಂದರ್ಶನ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News