ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿತಿನ್ ವಿರುದ್ಧ ಕ್ರಮಕೈಗೊಳ್ಳಬೇಕು: ಉ.ಪ್ರ. ಕಾಂಗ್ರೆಸ್ ಘಟಕ ಆಗ್ರಹ
ಹೊಸದಿಲ್ಲಿ,ಆ.27: ಪೂರ್ಣಕಾಲಿಕ ನಾಯಕತ್ವ ಹಾಗೂ ಪಕ್ಷದ ನಿಯಮದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಕೋರಿ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ 23 ಹಿರಿಯ ನಾಯಕರ ಪೈಕಿ ಒಬ್ಬರಾಗಿರುವ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉತ್ತರಪ್ರದೇಶ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಹೈಕಮಾಂಡ್‌ಗೆ ಬರೆದಿರುವ ಪತ್ರಕ್ಕೆ ಸಹಿ ಹಾಕಿರುವ ಇನ್ನೋರ್ವ ಹಿರಿಯ ನಾಯಕ ಕಪಿಲ್ ಸಿಬಲ್ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಹೆಜ್ಜೆಯನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.
"ಉತ್ತರಪ್ರದೇಶ ಕಾಂಗ್ರೆಸ್‌ನಲ್ಲಿ ಜಿತಿನ್ ಪ್ರಸಾದರನ್ನು ಅಧಿಕೃತವಾಗಿ ಗುರಿ ಮಾಡುತ್ತಿರುವುದು ದುರದೃಷ್ಟಕರ. ತಮ್ಮ ಪಕ್ಷದವರನ್ನು ಗುರಿ ಮಾಡುವ ಮೂಲಕ ತಮ್ಮ ಸಮಯವನ್ನು ವ್ಯರ್ಥಮಾಡುವ ಬದಲು ಸರ್ಜಿಕಲ್ ಸ್ಟ್ರೈಕ್ ಮೂಲಕ ಬಿಜೆಪಿಯನ್ನು ಗುರಿ ಮಾಡುವ ಅಗತ್ಯವಿದೆ'' ಎಂದು ಸಿಬಲ್ ಬರೆದಿದ್ದಾರೆ.
ಸೋನಿಯಾ ಗಾಂಧಿಗೆ ಪತ್ರ ಬರೆದವರ ಪೈಕಿ ಉತ್ತರಪ್ರದೇಶದಿಂದ ಸಹಿ ಹಾಕಿರುವ ಮೊದಲ ನಾಯಕ ಪ್ರಸಾದ್. 2009ರ ಲೋಕಸಭಾ ಚುನಾವಣೆಯಲ್ಲಿ ದೌಹ್ರಾರ ಕ್ಷೇತ್ರದಿಂದ ಜಯ ಸಾಧಿಸಿ ಕೇಂದ್ರ ಸಚಿವರಾಗಿದ್ದರು.