ನಾಗರಿಕ ಸೇವೆಯಲ್ಲಿರುವ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ದ್ವೇಷ ಹರಡಿದ ‘ಸುದರ್ಶನ್ ನ್ಯೂಸ್’: IPS ಅಸೋಸಿಯೇಶನ್ ಖಂಡನೆ

Update: 2020-08-27 14:49 GMT

ಹೊಸದಿಲ್ಲಿ: ನಾಗರಿಕ ಸೇವೆಗೆ ಸೇರ್ಪಡೆಯಾಗುವ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಗುರಿಯಾಗಿಸಿದ ವಿಡಿಯೋವೊಂದನ್ನು 'ಸುದರ್ಶನ್ ನ್ಯೂಸ್' ನ ಸುದ್ದಿ ಸಂಪಾದಕ ಸುರೇಶ್ ಚಾವಂಕೆ ಪೋಸ್ಟ್ ಮಾಡಿದ್ದು, ಐಪಿಎಸ್ ಅಸೋಸಿಯೇಶನ್ ಈ ಕೃತ್ಯವನ್ನು ಖಂಡಿಸಿದೆ.

ಈ ಹಿಂದೆಯೂ 'ಸುದರ್ಶನ್ ನ್ಯೂಸ್' ಮತ್ತು ಚಾವಂಕೆ ಇಸ್ಲಾಮೋಫೋಬಿಕ್ ಮತ್ತು ಕೋಮು ಸಾಮರಸ್ಯ ಕೆಡಿಸುವ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಉದಾಹರಣೆಗಳಿವೆ.

ಯುಪಿಎಸ್ ಸಿಯಲ್ಲಿ ಉತ್ತೀರ್ಣರಾದ, ನಾಗರಿಕ ಸೇವೆ ಸೇರಬಯಸುವ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಗುರಿಯಾಗಿಸಲಾದ ಈ ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಟ್ವೀಟ್ ಮಾಡಿರುವ ಐಪಿಎಸ್ ಅಸೋಸಿಯೇಶನ್. “ಸುದರ್ಶನ್ ಟಿವಿ ಧರ್ಮದ ಆಧಾರದಲ್ಲಿ ನಾಗರಿಕ ಸೇವೆಯ ಅಭ್ಯರ್ಥಿಗಳನ್ನು ಗುರಿ ಮಾಡುತ್ತಿದೆ. ನಾವು ಕೋಮುವಾದಿ ಮತ್ತು ಬೇಜವಾಬ್ದಾರಿಯ ಪತ್ರಿಕೋದ್ಯಮವನ್ನು ಖಂಡಿಸುತ್ತೇವೆ” ಎಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಯನ್ ಪೊಲೀಸ್ ಫೌಂಡೇಶನ್, “ಐಎಎಸ್/ಐಪಿಎಸ್ ಗೆ ಸೇರ್ಪಡೆಯಾಗುವ ಅಲ್ಪಸಂಖ್ಯಾತ ಅಭ್ಯರ್ಥಿಗಳ ವಿರುದ್ಧ ನೋಯ್ಡಾ ಚಾನೆಲ್ ದ್ವೇಷದ ಸುದ್ದಿ ಪ್ರಕಟಿಸುತ್ತಿದೆ. ಅದು ಸಂಪೂರ್ಣ ವಿಷಯುಕ್ತವಾಗಿರುವ ಕಾರಣ ನಾವು ಅದನ್ನು ರಿಟ್ವೀಟ್ ಮಾಡುತ್ತಿಲ್ಲ. ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡರ್ಸ್ ಅಥಾರಿಟಿ, ಪೊಲೀಸರು ಮತ್ತು ಸರಕಾರ ಕ್ರಮ ಕೈಗೊಳ್ಳುತ್ತವೆ ಎಂಬ ನಂಬಿಕೆ ಇದೆ” ಎಂದಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲೂ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸುದರ್ಶನ್ ಟಿವಿ ಮತ್ತು ಸುರೇಶ್ ಚಾವಂಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಚಾವಂಕೆ ಅವರು ವಿವಾದಿತ ವಿಡಿಯೋದಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಗಳಾಗುತ್ತಿರುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು , ‘ಯುಪಿಎಸ್‌ಸಿ ಜಿಹಾದ್’ನ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ತಾನು ಬಿಜೆಪಿಯ ರಾಜ್ಯಸಭಾ ಸದಸ್ಯ ಹರನಾಥ್ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಿರುವ ಮುಸ್ಲಿಂ ಅಭ್ಯರ್ಥಿಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿರುವುದಾಗಿ ಚಾವಂಕೆ ಹೇಳಿದ್ದಾರೆ.

ಚಾವಂಕೆ ದ್ವೇಷಭಾಷಣದ ವಿರುದ್ಧ ದೂರು ದಾಖಲು

ಈ ಮಧ್ಯೆ ಸುರೇಶ್ ಚಾವಂಕೆಯ ದ್ವೇಷಭಾಷಣದ ವಿರುದ್ಧ ಸಾಮಾಜಿಕ ಹೋರಾಟಗಾರರು, ಮಾನವಹಕ್ಕು ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತ ಸಾಕೇತ್ ಗೋಖಲೆ ಅವರು ಮಹಾರಾಷ್ಟ್ರದ ಅಹ್ಮದ್‌ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಚಾವಂಕೆ ಒಡೆತನದ ‘ಸುದರ್ಶನ ಟಿವಿ’, ಮಹಾರಾಷ್ಟ್ರದ ಶಿರ್ಡಿಯಲ್ಲಿ ನೋಂದಣಿಯಾಗಿದೆ. ಚಾವಂಕೆ ವಿರುದ್ಧ ಜನರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆಯೂ ಗೋಖಲೆ ಮನವಿ ಮಾಡಿದ್ದಾರೆ. ಚಾವಂಕೆ ಅವರು ಈ ಹಿಂದೆಯೂ ದ್ವೇಷ ಭಾಷಣದಿಂದ ವಿವಾದ ಸೃಷ್ಟಿಸಿದ್ದರು. 2017ರಲ್ಲಿ ಅಮರನಾಥ ಯಾತ್ರಿಕ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಜ್ ಯಾತ್ರಿಕರ ಮೇಲೆ ದಾಳಿ ನಡೆಸುವಂತೆಯೂ ಅವರು ಕರೆ ನೀಡಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು.

ಅತ್ಯಾಚಾರ ಆರೋಪಿ

  2016ರಲ್ಲಿ ಸುದರ್ಶನ ಟಿವಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಚಾವಂಕೆ ತನ್ನ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದರು ಹಾಗೂ ಕ್ರಿಮಿನಲ್ ಬೆದರಿಕೆಯೊಡ್ಡಿದ್ದರೆಂದು ಆಪಾದಿಸಿ, ಪೊಲೀಸರಿಗೆ ದೂರು ನೀಡಿದ್ದರು. ರಾಜ್ಯದಲ್ಲಿ ಕೋಮು ಉದ್ವಿಗ್ನತೆಗೆ ಪ್ರಚೋದನೆ ನೀಡಿದ ಆರೋಪದಲ್ಲಿಯೂ ಉತ್ತರಪ್ರದೇಶ ಪೊಲೀಸರು ಆತನನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News