ಉಳ್ಳಾಲದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಳಾಂತರಿಸಲು ಕೋಡಿ-ಕೋಟೆಪುರ ನಿವಾಸಿಗರಿಂದ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ಆ.27:ಉಳ್ಳಾಲದ ಕೋಡಿಯಲ್ಲಿ ಉದ್ದೇಶಿತ ದ್ರವತ್ಯಾಜ್ಯ ಘಟಕಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಗುರುವಾರ ಮುಖಂಡರ ನಿಯೋಗವು ದ.ಕ.ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಘಟಕ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ದ್ರವತ್ಯಾಜ್ಯ ಶುದ್ಧೀಕರಿಸುವ ನಿಟ್ಟಿನಲ್ಲಿ ಸೇನರಬೈಲಿನಲ್ಲಿ ಜಮೀನು ಗುರುತಿಸಲಾಗಿದೆ. ಈಗಾಗಲೇ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಈ ನಡುವೆ ಘಟಕ ನಿರ್ಮಾಣದಿಂದ ಮುಂದಾಗ ಬಹುದಾದ ತೊಂದರೆಗಳಿಂದ ಆತಂಕಕ್ಕೀಡಾಗಿರುವ ನಗರಸಭೆಯ ಸ್ಥಳೀಯ ಸದಸ್ಯರು, ಧಾರ್ಮಿಕ, ಸಾಮಾಜಿಕ ಮತ್ತು ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನಿಗದಿತ ಪ್ರದೇಶ ಜನವಸತಿಯಿಂದ ಕೂಡಿದೆ. 300 ಮೀ. ಅಂತರದಲ್ಲಿ ಕನಿಷ್ಠ 7 ಸಾವಿರ ಜನಸಂಖ್ಯೆ, ಮೂರು ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳು, ಆರು ಮಸೀದಿಗಳು, ಮೂರು ದೇವಸ್ಥಾನಗಳಿವೆ. ಈ ಜಾಗ ಗುರುತಿಸುವ ಸಂದರ್ಭ ಅಧಿಕಾರಿಗಳು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಪ್ರದೇಶದಲ್ಲಿ ಅತ್ಯಧಿಕ ಮೀನುಗಾರ ಕಾರ್ಮಿಕರು, ಸಣ್ಣಪುಟ್ಟ ಮೀನುಗಾರಿಕಾ ಉದ್ಯಮವಿದ್ದು ಕಲುಷಿತ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಈಗಾಗಲೇ ಪರಿಸರ ಕಲುಷಿತಗೊಂಡಿದೆ. ಇಲ್ಲೇ ಒಳಚರಂಡಿ ತ್ಯಾಜ್ಯ ಶುದ್ದೀಕರಣ ಘಟಕ ನಿರ್ಮಾಣಗೊಂಡರೆ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹೆಚ್ಚಾಗಿ ದುರ್ವಾಸನೆ ಮತ್ತು ಚರ್ಮರೋಗ, ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಜಾಗದಿಂದ ಘಟಕ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ.
ಒಳಚರಂಡಿ ಕಾಮಗಾರಿ ಶೀಘ್ರ ಮುಗಿಸಿ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ 65,000 ಜನಸಂಖ್ಯೆ ಇದ್ದರೂ ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಒಳಚರಂಡಿ ಯೋಜನೆಗೆ ಏಳು ವರ್ಷಗಳ ಹಿಂದೆಯೇ 70 ಕೋಟಿ ರೂಪಾಯಿ ಮಂಜೂರಾಗಿದ್ದು, ರಸ್ತೆ ಅಗೆದು ಪೈಪ್‌ಲೈನ್ ಹಾಕಲಾಗಿದ್ದರೂ ಶೇ.20ರಷ್ಟು ಕಾಮಗಾರಿ ಬಾಕಿ ಇದೆ. ಶುದ್ಧೀಕರಣ ಘಟಕ ಅಗತ್ಯವಿದ್ದರೂ ಕೊಡಿ-ಕೋಟೆಪುರ ಸಹಿತ ಜನವಸತಿ ಪ್ರದೇಶದಲ್ಲಿ ಎಲ್ಲಿಯೂ ಶುದ್ಧೀಕರಣ ಘಟಕ ಸ್ಥಾಪಿಸದೆ, ಪರ್ಯಾಯ ಸ್ಥಳ ಗುರುತಿಸಬೇಕಾಗಿದೆ. ಇದಕ್ಕೆ ಉಳ್ಳಾಲ ನಗರಸಭೆಯ 31 ಕೌನ್ಸಿಲರ್‌ಗಳ ಪೈಕಿ 20 ಕೌನ್ಸಿಲರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಪರಿಗಣಿಸಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭ ಶಾಸಕ ಯು.ಟಿ.ಖಾದರ್, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಯು.ಕೆ., ಕೋಡಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್, ತೋಟ ಮಸೀದಿಯ ಅಧ್ಯಕ್ಷ ಇಬ್ರಾಹಿಂ, ನಾಡದೋಣಿ ಮತ್ತು ಗಿಲ್ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್, ಉಳ್ಳಾಲ ನಗರಸಭೆ ಸದಸ್ಯರಾದ ರಮೀಝ್, ಅಝೀಝ್, ಮುಖಂಡರಾದ ಯು.ಕೆ.ನಝೀರ್ ಕೋಡಿ, ಅಕ್ರಂ ಹಸನ್, ರಫೀಕ್, ಅಹ್ಮದ್ ಬಾವ, ಶರೀಫ್, ಲತೀಫ್ ತೋಟ, ಅಝೀಝ್ ಕೋಡಿ, ರಶೀದ್, ಇಸ್ಮಾಯಿಲ್ ಉಪಸ್ಥಿತರಿದ್ದರು.