×
Ad

ಆದಾಯಕ್ಕಿಂತ ಅಧಿಕ ಆಸ್ತಿ : ಕರಾವಳಿ ಕಾವಲು ಪಡೆಯ ನಿರೀಕ್ಷಕ ಗಂಗಿರೆಡ್ಡಿಗೆ ಶಿಕ್ಷೆ

Update: 2020-08-27 17:49 IST

ಮಂಗಳೂರು, ಆ.27: ಕರಾವಳಿ ಕಾವಲು ಪಡೆಯ ನಿರೀಕ್ಷಕ ಗಂಗಿರೆಡ್ಡಿಯು ಆದಾಯಕ್ಕಿಂತ ಅಧಿಕ  ಸಂಪಾದಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿಯವರು ನಿರೀಕ್ಷಕ ಗಂಗಿರೆಡ್ಡಿಗೆ 4 ವರ್ಷ ಸಾದಾ ಶಿಕ್ಷೆ ಮತ್ತು 5,00,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ  ಅನುಭವಿಸಲು ಆದೇಶಿಸಿದ್ದಾರೆ.

 2009ರ ಆಗಸ್ಟ್ 27ರಂದು ಗಂಗಿರೆಡ್ಡಿ ಬೆಳ್ತಂಗಡಿಯ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದರ್ಭ ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಡಿವೈಎಸ್‌ಪಿ ಸದಾನಂದ ವರ್ಣೇಕರ್ ಮತ್ತು ಅವರ ತಂಡವು ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು. ಅಲ್ಲದೆ 19 ಲಕ್ಷ ರೂ. ಮೊತ್ತದ ಆಸ್ತಿ ಪತ್ತೆಯಾದ ಬಗ್ಗೆ ವರದಿ ಮಾಡಿತ್ತು. ಬಳಿಕ ಡಿವೈಎಸ್‌ಪಿ ಎಂ.ವಿಠಲದಾಸ್ ಅವರು ಗಂಗಿರೆಡ್ಡಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರಕಾರದ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಅವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13 (1) (ಇ) ರ ಅಡಿ ಆರೋಪಿ ಗಂಗಿರೆಡ್ಡಿ ಅಪರಾಧ ಎಸಗಿದ್ದಾರೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News