‌ಮಂಗಳೂರು: ಶುಲ್ಕದಲ್ಲಿ 25 ಶೇ. ರಿಯಾಯಿತಿ ಘೋಷಿಸಿದ ಇಂಡಿಯನ್ ಡಿಸೈನ್ ಸ್ಕೂಲ್

Update: 2020-08-27 14:11 GMT

‌ಮಂಗಳೂರು, ಆ.27: ಕೊರೋನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಂಗಳೂರಿನ ‘ಇಂಡಿಯನ್ ಡಿಸೈನ್ ಸ್ಕೂಲ್ (ಐಡಿಎಸ್) ಶೈಕ್ಷಣಿಕ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಶೇ. 25 ರಿಯಾಯಿತಿ ಘೋಷಿಸಿದೆ. ಐಡಿಎಸ್‌ನಲ್ಲಿ ಸದ್ಯ ಕಲಿಯುತ್ತಿರುವ ಹಾಗೂ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ಈ ರಿಯಾಯಿತಿ ಸೌಲಭ್ಯ ಸಿಗಲಿದೆ.

ಕೋವಿಡ್-19ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರಿಗೆ ನೆರವಾಗುವ ಉದ್ದೇಶದಿಂದ ಐಡಿಎಸ್ ಈ ಶುಲ್ಕ ರಿಯಾಯಿತಿ ಪ್ರಕಟಿಸಿದೆ ಎಂದು ಐಡಿಎಸ್ ಅಧ್ಯಕ್ಷ ಮುಹಮ್ಮದ್ ನಿಸಾರ್ ತಿಳಿಸಿದ್ದಾರೆ.

ಕೊರೋನ ಬಿಕ್ಕಟ್ಟಿನಿಂದಾಗಿ 4 ತಿಂಗಳುಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಸಂಪೂರ್ಣ ಹೊಡೆತ ಬಿದ್ದಿದೆ. ಇದು ಸಣ್ಣ ಮತ್ತು ಎಲ್ಲಾ ರೀತಿಯ ಉದ್ಯಮಗಳ ಮೇಲೂ ಪರಿಣಾಮ ಬೀರಿದ್ದು ಮಾತ್ರವಲ್ಲದೆ, ಜನರ ಉದ್ಯೋಗ ಮತ್ತು ಅವರ ಉಳಿತಾಯದ ಮೇಲೂ ಗಂಭೀರ ಪರಿಣಾಮ ಬೀರಿದೆ. ಇದರಿಂದಾಗಿ ಮಕ್ಕಳ ಶಿಕ್ಷಣ, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದು ಹೆತ್ತವರಿಗೆ ತ್ರಾಸದಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಕುಟುಂಬಗಳ ಪರಿಸ್ಥಿತಿಯನ್ನು ಗಮನದಲ್ಲಿರಿಕೊಂಡು ಐಡಿಎಸ್ ಎಲ್ಲ ವಿದ್ಯಾರ್ಥಿಗಳಿಗೆ 25 ಶೇ. ಶುಲ್ಕ ಕಡಿತದ ನಿರ್ಧಾರವನ್ನು ಕೈಗೊಂಡಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘‘ಹೆತ್ತವರು ಮತ್ತು ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತಿರುವುದು ನಮ್ಮ ಸಂಸ್ಥೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ನಾವು ಎಲ್ಲಾ ವಿಷಯಗಳಿಗಿಂತಲೂ ಶಿಕ್ಷಣಕ್ಕೆ ಮಹತ್ವವನ್ನು ನೀಡುತ್ತಿದ್ದೇವೆ. ನಾವೇನು ಮಾಡಿದರೂ ಅದು ಸಮಾಜಕ್ಕೂ ಸಹಕಾರಿಯಾಗಬೇಕು’’ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸುತ್ತಾರೆ.

ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಖ್ಯಾತಿ ಗಳಿಸಿರುವ ಐಡಿಎಸ್ ಅಧ್ಯಕ್ಷ ಮುಹಮ್ಮದ್ ನಿಸಾರ್ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಮಂಗಳೂರಿನ ಅಗ್ರ ಡಿಸೈನ್ ಸಂಸ್ಥೆಯಾಗಿದೆ. ಸೃಜನಶೀಲತೆ ಮಾತ್ರವಲ್ಲದೆ, ತನ್ನ ಮೌಲ್ಯಗಳಿಂದಲೂ ಸಂಸ್ಥೆಯು ಖ್ಯಾತಿಯನ್ನು ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News