ಪರಮಾಣು ಸ್ಥಾವರ ಸ್ಥಳಗಳ ಪರಿಶೀಲನೆಗೆ ಇರಾನ್ ಅನುಮೋದನೆ

Update: 2020-08-27 14:26 GMT

ಟೆಹರಾನ್ (ಇರಾನ್), ಆ. 27: ಇರಾನ್‌ನ ಪರಮಾಣು ಸ್ಥಾವರಗಳು ಎಂದು ಹೇಳಲಾದ ಎರಡು ಸ್ಥಳಗಳಲ್ಲಿ ತಪಾಸಣೆ ನಡೆಸಲು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಗೆ ಇರಾನ್ ಬುಧವಾರ ಅಂಗಿಕಾರ ನೀಡಿದೆ.

ಇರಾನ್ ಮೇಲೆ ವಿವಾದಾಸ್ಪದ ಅಂತರ್‌ರಾಷ್ಟ್ರೀಯ ದಿಗ್ಬಂಧನವನ್ನು ಮರುಹೇರುವ ಅಮೆರಿಕದ ಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಫಲಗೊಳಿಸಿದ ಗಂಟೆಗಳ ಬಳಿಕ, ಇರಾನ್ ಈ ಅನುಮೋದನೆಯನ್ನು ನೀಡಿದೆ.

ಅಮೆರಿಕದ ಯತ್ನವು ಇರಾನ್ ಮತ್ತು ಜಾಗತಿಕ ಪ್ರಭಾವಿ ದೇಶಗಳ ನಡುವೆ 2015ರಲ್ಲಿ ಏರ್ಪಟ್ಟ ಪರಮಾಣು ಒಪ್ಪಂದವನ್ನು ಬುಡಮೇಲುಗೊಳಿಸುವ ಉದ್ದೇಶವನ್ನು ಹೊಂದಿತ್ತು. ತನ್ನ ವಿರುದ್ಧದ ದಿಗ್ಬಂಧನಗಳನ್ನು ತೆರವುಗೊಳಿಸಿದರೆ, ತನ್ನ ಪರಮಾಣು ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಆ ಒಪ್ಪಂದದಲ್ಲಿ ಇರಾನ್ ಒಪ್ಪಿತ್ತು.

ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018ರಲ್ಲಿ ಅವೆುರಿಕವನ್ನು ಆ ಒಪ್ಪಂದದಿಂದ ಹಿಂದಕ್ಕೆಳೆದುಕೊಂಡರು. ಅದಕ್ಕೆ ಪ್ರತೀಕಾರವಾಗಿ, ಇರಾನ್ ಕೂಡ ಒಪ್ಪಂದದ ಒಂದೊಂದೇ ಬದ್ಧತೆಗಳಿಂದ ಹಿಂದಕ್ಕೆ ಸರಿಯಿತು.

ಆದರೆ, 2000ದ ದಶಕದ ಆರಂಭದಲ್ಲಿ ಅಘೋಷಿತ ಪರಮಾಣು ಚಟುವಟಿಕೆಗಳನ್ನು ನಡೆಸುತ್ತಿತ್ತು ಎನ್ನಲಾದ ಎರಡು ಸ್ಥಳಗಳ ತಪಾಸಣೆಗೆ ಇರಾನ್ ಬುಧವಾರ ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಗೆ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News