×
Ad

ಆತ್ಮಹತ್ಯೆ ಮಾಡುತ್ತೇನೆ ಎಂದು ಬ್ರಿಟಿಷ್ ಪ್ರಧಾನಿಗೆ ಸಂದೇಶ ಕಳುಹಿಸಿದ ಭಾರತೀಯ ಮಹಿಳೆ!

Update: 2020-08-28 14:03 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಮಾನಸಿಕ ಅಸ್ವಸ್ಥಳೆಂದು ತಿಳಿಯಲಾದ 43 ವರ್ಷದ ಮಹಿಳೆಯೊಬ್ಬರು ತಾನು ಕಷ್ಟದಲ್ಲಿರುವುದಾಗಿ ಹಾಗೂ ಇನ್ನು ಎರಡು ಗಂಟೆಗಳಲ್ಲಿ ಸಹಾಯ ದೊರೆಯದೇ ಇದ್ದರೆ ಆತ್ಮಹತ್ಯೆಗೈಯ್ಯುವುದಾಗಿ ಹೇಳಿಕೊಂಡು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕಳುಹಿಸಿದ್ದ ಇಮೇಲ್‍ನಿಂದಾಗಿ ಲಂಡನ್‍ನಲ್ಲಿರುವ ಭಾರತೀಯ ದೂತಾವಾಸ ಹಾಗೂ ನಂತರ ಅಲ್ಲಿಂದ ಭಾರತದ ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ಹೋಗಿ ದಿಲ್ಲಿ ಪೊಲೀಸರು ರಾತ್ರಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಕೊನೆಗೂ ಪತ್ತೆ ಹಚ್ಚಿ ಆಕೆ ಆತ್ಮಹತ್ಯೆಗೈಯ್ಯದಂತೆ ತಡೆದಿದ್ದಾರೆ.

ಮೂಲಗಳ ಪ್ರಕಾರ ಮಹಿಳೆಯ ವಿವಾಹ ಮುರಿದು ಬಿದ್ದುದರಿಂದ ಅವರು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ದೊರೆಯುತ್ತಲೇ ತಕ್ಷಣ ಕಾರ್ಯಪ್ರವೃತ್ತರಾದ ರೋಹಿಣಿಯ ಅಮನ್ ವಿಹಾರ್ ಪೊಲೀಸ್ ಠಾಣೆಯ ಸಿಬ್ಬಂದಿ, ಮಹಿಳೆಯ ನಿಖರ ವಿಳಾಸವಿಲ್ಲದೇ ಇದ್ದುದರಿಂದ ಮನೆಮನೆಗೆ ಭೇಟಿ ನೀಡಿ ಆಕೆಗಾಗಿ ಹುಡುಕಾಡಿ ನಂತರ ಮುಂಜಾನೆ 1 ಗಂಟೆ ಹೊತ್ತಿಗೆ ಆಕೆಯ ಮನೆಯ ಕದ ತಟ್ಟಿದ್ದರು. ಆರಂಭದಲ್ಲಿ  ಬಾಗಿಲು ತೆರೆಯಲು ಮಹಿಳೆ ಒಪ್ಪದೇ ಇದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಮನೆಯ ಬಾಗಿಲು ಒಡೆಯಬೇಕೆನ್ನುವಷ್ಟರಲ್ಲಿ ಆಕೆ ಬಾಗಿಲು ತೆರೆದಿದ್ದಳು.

ತಾನು ಚೆನ್ನಾಗಿದ್ದೇನೆ ಎಂದು ಹೇಳಿ ಅವರೆಲ್ಲರನ್ನೂ ಆಕೆ ಹೋಗುವಂತೆ ತಿಳಿಸಿದರೂ ಕೆಲವರು ಆಕೆಯ ಮನೆಯೊಳಗೆ ಹೋದಾಗ ಅಲ್ಲಿ 16ರಿಂದ 18 ಬೆಕ್ಕುಗಳಿರುವುದು ಹಾಗೂ ಇಡೀ ಮನೆ ಗಲೀಜಾಗಿರುವುದು ಹಾಗೂ ಮಹಿಳೆಯ ಮೈತುಂಬಾ ಕೊಳಕು ತುಂಬಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾನು ಎಂಸಿಡಿ ಶಾಲೆಯ ಶಿಕ್ಷಕಿಯಾಗಿದ್ದಾಗಿ ಹಾಗೂ ವೈಯಕ್ತಿಕ ಕಾರಣದಿಂದ ಉದ್ಯೋಗ ತೊರೆದಿದ್ದಾಗಿ, ತಾನು ವಿಚ್ಛೇದಿತೆ, ಕೆಲ ವರ್ಷಗಳ ಹಿಂದೆ ಪಡೆದ ಸಾಲಕ್ಕೆ ಇಎಂಐ ಪಾವತಿಸಿಲ್ಲ ಎಂದೂ ಹೇಳಿದ ಮಹಿಳೆ ತನ್ನ ಸಂಬಂಧಿಕರ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಆಕೆಯ ಸಮಸ್ಯೆ ಪರಿಹಾರಕ್ಕೆ ಇಬ್ಬರು ಮನಃಶಾಸ್ತ್ರಜ್ಞರು ಹಾಗೂ ಒಬ್ಬ ವೈದ್ಯರನ್ನು ಅಲ್ಲಿಗೆ ಕಳುಹಿಸಲಾಯಿತು. ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಆಕೆಗೆ ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News