ಚುನಾವಣೆ ನಡೆಯದೇ ಇದ್ದರೆ ಕಾಂಗ್ರೆಸ್ ಇನ್ನೂ 50 ವರ್ಷ ವಿಪಕ್ಷ ಸ್ಥಾನದಲ್ಲೇ ಇರಬೇಕಾಗುತ್ತದೆ: ಗುಲಾಂ ನಬಿ ಆಝಾದ್

Update: 2020-08-28 11:14 GMT

ಹೊಸದಿಲ್ಲಿ, ಆ.28: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ರಾಜ್ಯ ಮುಖ್ಯಸ್ಥರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರುಗಳಂತಹ ಪ್ರಮುಖ ಸಂಘಟನಾ ಹುದ್ದೆಗಳಿಗೆ ಚುನಾವಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂನಬಿ ಆಝಾದ್, ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವವರು ಚುನಾವಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದು ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿರುವ 23 ನಾಯಕರ ಪೈಕಿ ಆಝಾದ್  ಪ್ರಮುಖರು.

ಪಕ್ಷವನ್ನು ಚುನಾಯಿತ ಮಂಡಳಿಯು ಮುನ್ನಡೆಸಿದರೆ ಪಕ್ಷದ ದೂರದೃಷ್ಟಿ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಕಾಂಗ್ರೆಸ್ ಮುಂದಿನ 50 ವರ್ಷಗಳಕಾಲವೂ ವಿಪಕ್ಷ ಸ್ಥಾನದಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಎಂದು ಆಝಾದ್ ಎಚ್ಚರಿಸಿದರು.

"ನಾವು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಕನಿಷ್ಠ ಶೇ.51ರಷ್ಟು ಬೆಂಬಲ ಸಿಗಲಿದೆ. ಪಕ್ಷದಲ್ಲಿರುವ ಇಬ್ಬರು-ಮೂವರ ವಿರುದ್ಧ ಮಾತ್ರ ಸ್ಪರ್ಧಿಸಬೇಕಾಗುತ್ತದೆ. ಶೇ.51ರಷ್ಟು ಮತ ಪಡೆಯುವ ವ್ಯಕ್ತಿ ಚುನಾಯಿತನಾಗುತ್ತಾನೆ.ಇತರರು ಶೇ.10ರಿಂದ 15ರಷ್ಟು ಮತ ಪಡೆಯುತ್ತಾರೆ. ಚುನಾವಣೆಯಲ್ಲಿ ಗೆದ್ದವನು ಪಕ್ಷದ ಅಧ್ಯಕ್ಷನಾಗುತ್ತಾನೆ. ಆತನಿಗೆ ಶೇ.51ರಷ್ಟು ಜನರ ಬೆಂಬಲವಿರುತ್ತದೆ. ಈಗ ಪಕ್ಷದ ಅಧ್ಯಕ್ಷನಾದವವನಿಗೆ ಶೇ.1ರಷ್ಟು ಬೆಂಬಲವಿಲ್ಲ. ಸಿಡಬ್ಲುಸಿ ಸದಸ್ಯರುಗಳು ಆಯ್ಕೆ ಮಾಡಿದವರನ್ನು ತೆಗೆಯುವಂತಿಲ್ಲ ಎಂದು ಎಎನ್‌ಐಗೆ ಆಝಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News