×
Ad

ಮೀನುಗಾರರ ರಕ್ಷಣೆಗೆ ಸೀ ಆಂಬುಲೆನ್ಸ್ ವ್ಯವಸ್ಥೆ: ಭಾಸ್ಕರ್ ರಾವ್ ಭರವಸೆ

Update: 2020-08-28 18:11 IST

ಮಲ್ಪೆ, ಆ.28: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಅನಾರೋಗ್ಯ ಅಥವಾ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಮೀನುಗಾರರ ರಕ್ಷಣೆಗೆ ಸೀ ಆಂಬುಲೆನ್ಸ್ ಸೇರಿದಂತೆ ರಕ್ಷಣಾ ವ್ಯವಸ್ಥೆಗೆ ಅಗತ್ಯ ಕ್ರಮವನ್ನು ತೆಗೆದು ಕೊಳ್ಳಲಾಗುವುದು ಎಂದು ರಾಜ್ಯದ ಅಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.

ಆ.25ರಂದು ಮಲ್ಪೆಯ ಕರಾವಳಿಯ ಕಾವಲು ಪಡೆಯ ಕಚೇರಿಯಲ್ಲಿ ಮೀನುಗಾರ ಮುಖಂಡರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಹೊರರಾಜ್ಯದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಅಲ್ಲಿನ ಸ್ಥಳೀಯ ಮೀನುಗಾರರು, ಕರಾವಳಿಯ ಪೊಲೀಸರು ಸುಳ್ಳು ಆರೋಪ ಮಾಡಿ, ಉಡುಪಿ ಜಿಲ್ಲೆಯ ಬೋಟುಗಳನ್ನು ಹಿಡಿದು ಮೀನುಗಳನ್ನು ದೋಚಿ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯಗಳ ಜಂಟಿ ಸಮಿತಿಯನ್ನು ರಚಿಸಬೇಕು. ಹವಾಮಾನ ವೈಪರೀತ್ಯಾ ಸಂದರ್ಭದಲ್ಲಿ ಬೋಟು ಗಳಿಗೆ ವಾಣಿಜ್ಯ ಬಂದರುಗಳಲ್ಲಿಯೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮೀನುಗಾರರು ಮನವಿ ಮಾಡಿದರು.

ಮೀನುಗಾರಿಕೆಯ ವೇಳೆ ಮೀನುಗಾರ ಕಾರ್ಮಿಕರಿಗೆ ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಅನ್ಯರಾಜ್ಯ ಬಂದರು ಪ್ರವೇಶಕ್ಕೆ ಅವಕಾಶ ನೀಡ ಬೇಕು. ಸಮುದ್ರ ಮಧ್ಯೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಹೊರರಾಜ್ಯದ ಬಂದರಿಗೆ ಹೋದಾಗ ವಿಚಾ ರಣೆಯಿಂದಾಗಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗಿ ರೋಗಿಯ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಅಗತ್ಯ ಸೀ ಅಂಬುಲೆನ್ಸ್‌ನ್ನು ಒದಗಿಸಬೇಕೆಂದು ಮೀನುಗಾರರು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಮೀನುಗಾರ ಮುಖಂಡರಾದ ಕೇಶವ ಕುಂದರ್, ಗೋಪಾಲ ಆರ್.ಕೆ., ರವಿರಾಜ್ ಸುವರ್ಣ ಮೊದಲಾದವು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News