ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಫ್ಲಾಸ್ಮಾ ಥೆರಪಿ ಘಟಕ ಆರಂಭ
ಮಂಗಳೂರು, ಆ.28: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊತ್ತ ಮೊದಲ ಪ್ಲಾಸ್ಮಾ ಥೆರಪಿ ಘಟಕ (ರಾಜ್ಯದ ನಾಲ್ಕನೇ ಘಟಕ) ಆರಂಭಗೊಂಡಿದೆ.
ಇದು ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದ್ದು 1000 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗಾಗಿ ಮೀಸಲು ಹಾಸಿಗೆಗಳನ್ನು ಹೊಂದಿದೆ. ಸುಸಜ್ಜಿತ ತೀವ್ರನಿಗಾ ಘಟಕ (ಐಸಿಯು)ವನ್ನೂ ಕೂಡ ಹೊಂದಿದೆ.
ಡಿಸಿಜಿಐ (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಇಲ್ಲಿನ ಬ್ಲಡ್‌ಬ್ಯಾಂಕ್‌ನ ಸೌಲಭ್ಯಗಳನ್ನು ಪರಿಶೀಲಿಸಿ ಪ್ಲಾಸ್ಮಾ ಚಿಕಿತ್ಸೆಗೆ ಪರವಾನಗಿಯನ್ನು ನೀಡಿದೆ. ಮೊದಲ ದಿನವೇ ಮೂವರು ದಾನಿಗಳಿಂದ ಪ್ಲಾಸ್ಮಾ ಸ್ವೀಕರಿಸಿದೆ. ಅಲ್ಲದೆ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಧುನಿಕ ಸಾಧನಗಳು ಮತ್ತು ನುರಿತ ತಂತ್ರಜ್ಞರಿಂದ ಸುಸಜ್ಜಿತವಾಗಿರುವ ಬ್ಲಡ್ ಬ್ಯಾಂಕ್‌ನಿಂದಾಗಿ ಈಗ ಕೆ.ಎಸ್.ಹೆಗ್ಡೆ ಆಸ್ಪತ್ರೆ ಯಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಸೇರಿದಂತೆ ಕೋವಿಡ್-19 ರೋಗಿಗಳಿಗೆ ಎಲ್ಲಾ ಸೌಕರ್ಯದ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ನಿಟ್ಟೆ ವಿವಿಯ ರಕ್ತನಿಧಿಯು ಕರಾವಳಿ ಕರ್ನಾಟಕದ ಮೊಟ್ಟಮೊದಲ ಬ್ಲಡ್ ಬ್ಯಾಂಕ್ ಮತ್ತು ಸಿಂಗಲ್ ಡೋನರ್ ಪ್ಲೇಟ್‌ಲೆಟ್ ಸೌಕರ್ಯವನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯಾಗಿದೆ. ಪ್ಲಾಸ್ಮಾ ಥೆರಪಿಗೆ (ಇಟ್ಞಚ್ಝಛಿಠ್ಚಛ್ಞಿಠಿ ಇಟಜಿ 19 ಟ್ಝಞ) ಪರವಾನಗಿಯನ್ನು ಪಡೆದು ಚಿಕಿತ್ಸೆ ನೀಡುತ್ತಿ ರುವ ಕರಾವಳಿ ಕರ್ನಾಟಕದ ಮೊತ್ತ ಮೊದಲ ಸಂಸ್ಥೆ ಇದಾಗಿದೆ.
ವೈದ್ಯರು-ಪೊಲೀಸರೇ ಅಧಿಕ
ಈಗಾಗಲೆ ಸುಮಾರು 24 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಅದರಲ್ಲಿ ಜಿಲ್ಲೆಯ ವೈದ್ಯರು ಮತ್ತು ಪೊಲೀಸರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೆಲವು ಸಾಮಾಜಿಕ ಸಂಘಟನೆಗಳು ಕೂಡ ಈ ನಿಟ್ಟಿನಲ್ಲಿ ನಿಟ್ಟೆ ಆಸ್ಪತ್ರೆಯ ಅಧೀಕ್ಷಕರ ಜೊತೆ ನಿಕಟಸಂಪರ್ಕವನ್ನಿಟ್ಟುಕೊಂಡು ಕಾರ್ಯಾಚರಿ ಸುತ್ತಿವೆ.
ಯಾರು ಪ್ಲಾಸ್ಮಾ ದೇಣಿಗೆ ನೀಡಬಹುದು?
ಕೋವಿಡ್ 19ನಿಂದ ಗುಣಮುಖರಾದವರಲ್ಲಿ ಈ ಅಂಶಗಳು ಇದ್ದಲ್ಲಿ ಪ್ಲಾಸ್ಮಾ ದೇಣಿಗೆ ನೀಡಬಹುದು.
1.18 ವರ್ಷಕ್ಕಿಂತ ಮೇಲ್ಪಟ್ಟವರು
2. ಎಲ್ಲ ಪುರುಷರು ಹಾಗೂ ಈವರೆಗೆ ಗರ್ಭಿಣಿಯರಾಗಿರದ ಮಹಿಳೆಯರು
3. 55 ಕಿ.ಗ್ರಾಂ.ಗಿಂತ ಹೆಚ್ಚು ತೂಕವನ್ನು ಹೊಂದಿರುವವರು
4. ಆಸ್ಪತ್ರೆಯಿಂದ ಬಿಡುಗಡೆಗೊಂಡ 28 ದಿನಗಳ ಬಳಿಕ ಪ್ಲಾಸ್ಮಾ ದೇಣಿಗೆ ನೀಡಬಹುದು.
ಪ್ಲಾಸ್ಮಾ ಚಿಕಿತ್ಸೆ ಎಂದರೇನು ?
ಕೋವಿಡ್ 19 ವೈರಸ್‌ನ ವಿರುದ್ಧ ಹೋರಾಡಲು ಪ್ಲಾಸ್ಮಾ ಚಿಕಿತ್ಸೆಯು ನವೀನ ಮಾದರಿಯ ಚಿಕಿತ್ಸೆಯಾಗಿದೆ. ಇದರಲ್ಲಿ ಗುಣಮುಖರಾದವರ ದೇಹದಿಂದ ತೆಗೆದುಕೊಂಡ ಆ್ಯಂಟಿಬಾಡಿ(ಪ್ರತಿಜೀವಕಗಳು)ಗಳನ್ನು ಕೋವಿಡ್ 19 ವೈರಸ್‌ನಿಂದ ತೀವ್ರವಾಗಿ ಬಾಧಿತರಾದವರನ್ನು ಚಿಕಿತ್ಸೆ ಮಾಡಲು ಬಳಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8971010000ನ್ನು ಸಂಪರ್ಕಿಸಬಹುದು ಎಂದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಪ್ರಕಟನೆ ತಿಳಿಸಿದೆ.