×
Ad

​ಅಂಚೆ ಇಲಾಖೆಯಿಂದ ‘ಟೀಚರ್ಸ್ ಡೇ ಸ್ಪೆಷಲ್’

Update: 2020-08-28 18:41 IST

ಉಡುಪಿ, ಆ.28: ಕೊರೋನ ಮಹಾಮಾರಿಯಿಂದಾಗಿ ಶಿಕ್ಷಕರ ದಿನಾಚರಣೆ ಯನ್ನು ಈ ಬಾರಿ ವಿಶೇಷವಾಗಿ ಆಚರಿಲು ಅಂಚೆ ಇಲಾಖೆ ನಿರ್ಧರಿಸಿದೆ.

ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಗುರುಗಳಿಗೆ ಗುರುವಂದನೆ ಸಲ್ಲಿಸುವ ಪ್ರಕ್ರಿಯೆಯನ್ನು ಮನೆಯ ಒಳಗೆ ಕುಳಿತು ಸುಲಭ ವಿಧಾನದಲ್ಲಿ ನಡೆಸಲು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ಯೋಜನೆಯೊಂದನ್ನು ರೂಪಿಸಿದೆ.
karnatakapost.gov.in- ಮೂಲಕ ನಮ್ಮ ದೇಶ ಮಾತ್ರವಲ್ಲದೇ ಹೊರದೇಶದಲ್ಲಿರುವವರಿಗೂ, ಭಾರತದ ಯಾವುದೇ ಪ್ರದೇಶದಲ್ಲಿರುವ ಶಿಕ್ಷಕರಿಗೆ ಗುರುವಂದನೆಯನ್ನು ಇದರ ಮೂಲಕ ಸಲ್ಲಿಸಬಹುದು. ಬಹಳ ಸುಲಭವಾಗಿ, ತ್ವರಿತವಾಗಿ 100ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ -https://karnatakapost.gov.in/Guru_Vandana- ಇದಕ್ಕೆ ಲಾಗಿನ್ ಆಗಿ ಶುಲ್ಕವನ್ನು ಅಂತರ್ಜಾಲ ಬ್ಯಾಂಕಿಂಗ್ ಇಲಾಖೆಯ ಐಪಿಪಿಬಿ, ಗೂಗಲ್‌ಪೇ, ಭೀಮ್ ಆ್ಯಪ್, ಫೋನ್‌ಪೇ ಮುಂತಾದ ವಿಧಾನ ಗಳಿಂದ ಪಾವತಿಸಬಹುದಾಗಿದೆ. ಅದರ ಯುಟಿಆರ್ ಕ್ರಮಸಂಖ್ಯೆಯನ್ನು ಹಾಕಿ ಕಳುಹಿಸುವವರ ಸಂಪೂರ್ಣ ವಿವರಗಳನ್ನು ನೀಡಬೇಕು.

ಶಿಕ್ಷಕರಿಗೆ ಆಕರ್ಷಕ ಕೊಡುಗೆಗಳನ್ನು ಕಳುಹಿಸಲು ಮೂರು ವಿಧದ ಕೊಡುಗೆಗಳಾದ ಖಾದಿ ಫೇಸ್ ಮಾಸ್ಕ್, ಸೀಡ್ ಪೆನ್ಸಿಲ್ ಹಾಗೂ ಬುಕ್ ಮಾರ್ಕ್‌ಗಳು ವೀಕ್ಷಣೆಗೆ ಲಭ್ಯವಿದ್ದು, ಪ್ರತಿಯೊಂದು ಕೊಡುಗೆಯ ಮುಂದೆ ವಿನ್ಯಾಸದ ಅಂಕಿಯನ್ನು ನಮೂದಿಸಲಾಗಿದೆ. ತಮಗೆ ಬೇಕಾದ ಕೊಡುಗೆಗಳನ್ನು ಆರಿಸಿ ಮುಂದುವರಿದಾಗ ಸಂದೇಶ ಕಳುಹಿಸುವ ಆಯ್ಕೆ ಕಾಣಸಿಗುತ್ತದೆ.

ಸುಮಾರು ಮೂರು ರೀತಿಯ ಮುದ್ರಿತ ಸಂದೇಶಗಳನ್ನು ಆಯ್ಕೆ ಮಾಡುವ, ಇಲ್ಲವೇ ನಮಗೆ ಬೇಕಾದ ಸಂದೇಶವನ್ನು ಬರೆದು ಅದರ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಇದರಲ್ಲಿ ಲಭ್ಯವಿದೆ.

ಶಿಕ್ಷಕರ ದಿನಾಚರಣೆಯ ಸಾಮಾನ್ಯ ಸಂದೇಶಗಳು ಅಥವಾ ಡಾ.ಎಸ್ ರಾಧಾಕೃಷ್ಣನ್, ಅಬ್ದುಲ್ ಕಲಾಂರ ಚಿತ್ರ, ಸಂದೇಶಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ಗುರುವಂದನೆಯ ಅರ್ಥಪೂರ್ಣ ಸಂದೇಶಗಳನ್ನು ಹೊತ್ತ ವಿಶಿಷ್ಟ ವಿನ್ಯಾಸದ ಗುರುವಂದನಾ ಲಕೋಟೆಗಳಲ್ಲಿ ಇವು ತಮ್ಮ ನೆಚ್ಚಿನ ಗುರುಗಳನ್ನು ತ್ವರಿತ ಅಂಚೆಯ ಮೂಲಕ ತಲುಪುವಂತೆ ರೂಪಿಸಲಾಗಿದೆ.

ಹೊರದೇಶದಲ್ಲಿರುವ ಭಾರತೀಯರು ತಮ್ಮ ಇಲ್ಲಿನ ಬ್ಯಾಂಕ್ ಖಾತೆಯ ಮೂಲಕ ಭಾರತದೊಳಗಿರುವ ಗುರುಗಳಿಗೆ ಕೊಡುಗೆ ಕಳುಸಬ ಹುದಾಗಿದೆ. ಈ ಕುರಿತು ಹೆಚ್ಚಿನ ವಿವರಗಳಿಗೆ -www.karnatakapost.gov.in- ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸ ಬಹುದು ಎಂದು ಉಡುಪಿ ಜಿಲ್ಲಾ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News