×
Ad

ಮೂಡುಬಿದಿರೆ: ದಿನಸಿ ಅಂಗಡಿಯ ಸಿಬ್ಬಂದಿಗೆ ಹಲ್ಲೆಗೈದು ಸುಲಿಗೆಗೈದ ಆರೋಪಿಗಳಿಗೆ 10 ವರ್ಷ ಕಠಿಣ ಸಜೆ

Update: 2020-08-28 20:11 IST

ಮಂಗಳೂರು, ಆ. 28: ಮೂಡುಬಿದಿರೆಯ ದಿನಸಿ ಅಂಗಡಿಯೊಂದರ ಸಿಬ್ಬಂದಿಗೆ ಹಲ್ಲೆಗೈದು ಲಕ್ಷಾಂತರ ರೂ. ಸುಲಿಗೆಗೈದ ಪ್ರಕರಣ ಆರೋಪಿಗಳಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ಮತ್ತು 36 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕಾಸರಗೋಡು ಜಿಲ್ಲೆಯ ಉಮರ್ ಫಾರೂಖ್ (35), ಬೆಳ್ತಂಗಡಿಯ ಕೆಂಪಯ್ಯಗುಡ್ಡ ಯಾನೆ ಹರೀಶ್ ಶೆಟ್ಟಿ (50), ಕರಿಂಜೆ ಕಲ್ಲಬೆಟ್ಟು ನಿವಾಸಿ ಸತೀಶ್ ಭಂಡಾರಿ (57) ಶಿಕ್ಷೆಗೊಳಗಾದ ಅಪರಾಧಿಗಳು. ಇನ್ನೊಬ್ಬ ಆರೋಪಿ ಕಾರು ಚಾಲಕ ಚಿಲಿ ಅಶ್ರಫ್ ತಲೆ ಮರೆಸಿಕೊಂಡಿದ್ದಾನೆ.

ಪ್ರಕರಣ ವಿವರ: ಮೂಡುಬಿದಿರೆಯಲ್ಲಿ ಮುಹಮ್ಮದ್ ಶರೀಫ್ ಎಂಬವರು ದಿನಸಿ ಅಂಗಡಿ ನಡೆಸುತ್ತಿದ್ದು, ಈ ಅಂಗಡಿಯಲ್ಲಿ ಚಂದ್ರಶೇಖರ್ ಮತ್ತು ಪೂರ್ಣೇಶ್ ಕೆಲಸಕ್ಕಿದ್ದರು. 2015ರ ನ.9ರ ದೀಪಾವಳಿಯಂದು ಇವರಿಬ್ಬರು ಅಂಗಡಿಯನ್ನು ಮುಚ್ಚಿ 4.50ಲಕ್ಷ ರೂ. ಹಣದೊಂದಿಗೆ ಮಾಲಕನ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಮೂಡುಬಿದಿರೆ ಪ್ರಾಂತ್ಯ ಸರಕಾರಿ ಶಾಲೆಯ ಬಳಿ ಮಾರುತಿ 800 ಕಾರಿನಲ್ಲಿ ಬಂದ 4 ಮಂದಿ ಏಕಾಏಕಿ ಸ್ಕೂಟರ್‌ನ್ನು ಅಡ್ಡಗಟ್ಟಿ ಕತ್ತಿಯಿಂದ ಇಬ್ಬರಿಗೂ ಮಾರಣಾಂತಿಕವಾಗಿ ಹಲ್ಲೆಗೈದಿದ್ದರು. ಇದರಿಂದ ಗಂಭೀರ ಗಾಯಗೊಂಡು ಚಂದ್ರಶೇಖರ್ ಮತ್ತು ಪೂರ್ಣೇಶ್ ನೆಲಕ್ಕೆ ಬಿದ್ದ ವೇಳೆ ಆರೋಪಿಗಳು ಹಣದ ಚೀಲವನ್ನು ಕೈಗೆತ್ತಿಕೊಂಡು ಪರಾರಿಯಾಗಿದ್ದರು. ಈ ಘಟನೆಯ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಸುಮಾರು 6 ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.

ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ವಿಚಾರಣೆ ನಡೆಸಿ ಅಪರಾಧಿಗಳಿಗೆ ಐಪಿಸಿ 341 (ಅಕ್ರಮ ತಡೆ) ಪ್ರಕರಣದಡಿ 500 ರೂ. ದಂಡ, ಐಪಿಸಿ 392 (ಸುಲಿಗೆ ) ಪ್ರಕರಣದಡಿ 10 ವರ್ಷ ಕಠಿಣ ಸಜೆ ಮತ್ತು ತಲಾ 12 ಸಾವಿರ ರೂ. ದಂಡ, ಐಪಿಸಿ 397 (ಹಲ್ಲೆ ನಡೆಸಿ ಸುಲಿಗೆ) 8 ವರ್ಷ ಕಠಿಣ ಸಜೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯನ್ನು ಶಿಕ್ಷೆ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.

ವಿಚಾರಣೆ ವೇಳೆ 16 ಮಂದಿಯ ಸಾಕ್ಷಿ ಹಾಗೂ ರಕ್ತಸಿಕ್ತ ಬಟ್ಟೆ, ಹಣದ ಚೀಲ, ಸೇರಿದಂತೆ 26 ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸ ಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಹಣದಲ್ಲಿ ಸತೀಶ್ ಭಂಡಾರಿ ಬೈಕ್ ಖರೀದಿಸಿದರೆ ಉಳಿದವರು ಬೇಕಾಬಿಟ್ಟಿ ಖರ್ಚು ಮಾಡಿದ್ದರು. ಬೈಕನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿದೆ.

ದಂಡ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಗಾಯಗೊಂಡಿದ್ದ ಚಂದ್ರಶೇಖರ್ ಮತ್ತು ಪೂರ್ಣೇಶ್ ಅವರಿಗೆ ತಲಾ 15 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಬೇಕು ಮತ್ತು ಉಳಿದ ಹಣವನ್ನು ಸರಕಾರಕ್ಕೆ ಸಂದಾಯ ಮಾಡಬೇಕು. ಗಾಯಾಳುಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಲ್ಲಿ ಪರಿಹಾರ ಪಡೆಯಲು ಅರ್ಹರು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಲವು ಪ್ರಕರಣ: ಶಿಕ್ಷೆಗೊಳಗಾದ ಅಪರಾಧಿಗಳು ಈ ಹಿಂದೆಯೂ ಸುಮಾರು 5 ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ, ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು. ಈ ಆರೋಪಿಗಳು ಕಳ್ಳತನ ಮಾಡುವ ಮುನ್ನ ಯಾವುದಾದರೂ ವಾಹನವನ್ನು ಕಳವು ಮಾಡಿ ಅದೇ ವಾಹನದಲ್ಲಿ ಸುಲಿಗೆ ಕೃತ್ಯಕ್ಕಿಳಿಯುತ್ತಿದ್ದರು ಎನ್ನಲಾಗಿದೆ. ಮೂಡುಬಿದಿರೆಯ ದರೋಡೆ ನಡೆದ ಮುನ್ನ ದಿನವೂ ಮಂಗಳೂರಿನ ವಾಲ್ಟರ್ ಲೋಬೋ ಎಂಬವರ ಮಾರುತಿ 800 ಕಾರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸರಕಾರದ ಪರವಾಗಿ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News