×
Ad

ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ನುಸುಳುವಿಕೆ’ ಕುರಿತು ಸುದರ್ಶನ ಟಿವಿಯ ಕಾರ್ಯಕ್ರಮ ಪ್ರಸಾರಕ್ಕೆ ಹೈಕೋರ್ಟ್ ತಡೆ

Update: 2020-08-28 20:14 IST

ಹೊಸದಿಲ್ಲಿ,ಆ.28: ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ನುಸುಳುವಿಕೆ ’ಯನ್ನು ಬಯಲಿಗೆಳೆಯುತ್ತದೆ ಎಂದು ಹೇಳಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಸುದರ್ಶನ ಟಿವಿಯು ಪ್ರಸಾರಿಸುವುದಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆಯನ್ನು ನೀಡಿದೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ನವೀನ ಚಾವ್ಲಾ ಅವರ ಏಕ ನ್ಯಾಯಾಧೀಶ ಪೀಠವು ಈ ಆದೇಶವನ್ನು ಹೊರಡಿಸಿದೆ.

 ಸುದರ್ಶನ ಸುದ್ದಿವಾಹಿನಿಯ ಮುಖ್ಯಸಂಪಾದಕ ಸುರೇಶ್ ಚವ್ಹಾಣಕೆ ಅವರು ಆ.26ರಂದು ‘ಯುಪಿಎಸ್‌ಸಿ ಜಿಹಾದ್’ ಹ್ಯಾಷ್‌ಟ್ಯಾಗ್‌ನೊಂದಿಗೆ ಶೇರ್ ಮಾಡಿಕೊಂಡ ಕಾರ್ಯಕ್ರಮದ ಪ್ರೊಮೋಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿವೆ. ತನ್ನ ಮುಂಬರುವ ಕಾರ್ಯಕ್ರಮದ ಟ್ರೇಲರ್‌ನ್ನು ಟ್ವೀಟ್ ಮಾಡಿದ್ದ ಚವ್ಹಾಣಕೆ, ಇದು ನಾಗರಿಕ ಸೇವೆಗಳಲ್ಲಿ ‘ಮುಸ್ಲಿಮರ ನುಸುಳುವಿಕೆ ’ಯನ್ನು ಬಯಲಿಗೆಳೆಯಲಿದೆ ಎಂದು ಹೇಳಿಕೊಂಡಿದ್ದರು.

 ಚವ್ಹಾಣಕೆ ತನ್ನ ವೀಡಿಯೊದಲ್ಲಿ ಜಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ (ಆರ್‌ಸಿಎ)ಯಿಂದ ತರಬೇತಿ ಪಡೆದು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುವವರನ್ನು ‘ಜಾಮಿಯಾ ಕೆ ಜಿಹಾದಿ’ಗಳೆಂದು ಬಣ್ಣಿಸಿದ್ದರು. ವಿವಿಯ ವರ್ಚಸ್ಸಿಗೆ ಕಳಂಕವುಂಟು ಮಾಡುತ್ತಿರುವುದಕ್ಕಾಗಿ ಸುದರ್ಶನ ಸುದ್ದಿವಾಹಿನಿ ಮತ್ತು ಚವ್ಹಾಣಕೆ ಅವರ ವಿರುದ್ಧ ಕ್ರಮವನ್ನು ಜರುಗಿಸುವಂತೆ ಕೋರಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಗುರುವಾರ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರವನ್ನು ಬರೆದಿತ್ತು.

 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜಾಮಿಯಾದ ಕುಲಪತಿ ನಜ್ಮಾ ಅಖ್ತರ್ ಅವರು,ಈ ವಿಷಯದಲ್ಲಿ ವಿವಿಯು ನ್ಯಾಯಾಲಯದ ಮೆಟ್ಟಿಲನ್ನೇರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು. ಚವ್ಹಾಣಕೆ ಅವರು ಜಿಹಾದಿಯ ನೂತನ ‘ಜಾತ್ಯತೀತ ವ್ಯಾಖ್ಯೆ ’ಯನ್ನು ನೀಡಿದ್ದಾರೆ ಎಂದೂ ಹೇಳಿದ ಅವರು,‘ಅವರಿಗೆ ಅತಿಯಾದ ಪ್ರಾಮುಖ್ಯತೆ ನೀಡಲು ನಾವು ಬಯಸುವುದಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಆರ್‌ಸಿಎದ 30 ವಿದ್ಯಾರ್ಥಿಗಳು ಈ ಸಲ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 16 ಮುಸ್ಲಿಮರು ಮತ್ತು ಹಿಂದುಗಳು ಇದ್ದಾರೆ. ಅವರೆಲ್ಲರನ್ನು ಜಿಹಾದಿಗಳೆಂದು ಕರೆಯಲಾಗಿರುವುದರಿಂದ 16 ಮುಸ್ಲಿಮ್ ಜಿಹಾದಿಗಳು ಮತ್ತು ಇತರ 14 ಜನರು ಹಿಂದು ಜಿಹಾದಿಗಳಾಗಿದ್ದಾರೆ ಎಂದಾಯಿತು. ಭಾರತಕ್ಕೆ ಜಿಹಾದಿಗಳ ನೂತನ ಜಾತ್ಯತೀತ ವ್ಯಾಖ್ಯೆಯನ್ನು ನೀಡಲಾಗಿದೆ ’ಎಂದರು.

ಆರೋಪಗಳಿಗೆ ಪ್ರತಿಕ್ರಿಯಿಸಿದ ಚವ್ಹಾಣಕೆ ,ತಾನೇನು ಹೇಳಬೇಕಾಗಿದೆಯೋ ಅದನ್ನು ಶುಕ್ರವಾರ ರಾತ್ರಿ ಕಾರ್ಯಕ್ರಮದಲ್ಲಿ ಹೇಳುತ್ತೇನೆ ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ಈಗ ತಡೆಯಾಜ್ಞೆ ನೀಡಲಾಗಿದೆ.

 ‘ಆರ್‌ಸಿಎದಲ್ಲಿ ಹಿಂದುಗಳಿದ್ದಾರೆಯೇ ಎನ್ನುವುದು ನನಗೆ ಗೊತ್ತಿಲ್ಲ. ಜಿಹಾದಿ ಶಬ್ದವನ್ನು ವಿರೋಧಿಸುತ್ತಿರುವವರು ತಾವು ಅದನ್ನು ನಿಂದನೆ ಎಂದು ಭಾವಿಸಿದ್ದಾರೆಯೇ ಎಂಬ ಪ್ರಶ್ನೆಗೆ ಮೊದಲು ಉತ್ತರಿಸಬೇಕು. ನನ್ನ ನಿಲುವಿಗೆ ನಾನು ಅಂಟಿಕೊಂಡಿದ್ದೇನೆ ಮತ್ತು ನಾಗರಿಕ ಸೇವೆಗಳಲ್ಲಿ ಅವರ (ಮುಸ್ಲಿಮರು) ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂದು ಪ್ರಶ್ನಿಸಲು ಬಯಸಿದ್ದೇನೆ. ಅವರಿಗೆ ಹಿಂಬಾಗಿಲಿನಿಂದ ಉತ್ತೇಜನ,ಇಸ್ಲಾಮಿಕ್ ಅಧ್ಯಯನಗಳು ಮತ್ತು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ಯಾದಿಗಳು ಇದಕ್ಕೆ ಕಾರಣವಾಗಿವೆ. ನನ್ನ ಕಾರ್ಯಕ್ರಮವು ಸಂವಿಧಾನ ವಿರೋಧಿಯಾಗಿದ್ದರೆ ಅಥವಾ ಪ್ರಸಾರ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿರದಿದ್ದರೆ ನನ್ನ ವಿರುದ್ಧ ಕ್ರಮವನ್ನು ಕೈಗೊಳ್ಳಲಿ ’ ಎಂದು ಚವ್ಹಾಣಕೆ ಹೇಳಿದರು.

ಐಪಿಎಸ್ ಅಸೋಸಿಯೇಷನ್ ಕೂಡ ಸುದರ್ಶನ ಟಿವಿಯ ಕಾರ್ಯಕ್ರಮವನ್ನು ಬೇಜವಾಬ್ದಾರಿಯದ್ದು ಎಂದು ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News