×
Ad

ನೇತ್ರಾವತಿ, ಸ್ವರ್ಣ ನದಿಗಳಲ್ಲಿ ಆ್ಯಂಟಿಬಯೋಟಿಕ್ ಅಂಶ ಪತ್ತೆ

Update: 2020-08-29 23:04 IST

ಉಡುಪಿ, ಆ. 29: ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬಿ ಸಮುದ್ರದ ಒಡಲು ಸೇರುವ ಕರಾವಳಿಯ ಜೀವನದಿಗಳಾದ ದ.ಕ. ಜಿಲ್ಲೆಯ ನೇತ್ರಾವತಿ ಮತ್ತು ಉಡುಪಿ ಜಿಲ್ಲೆಯ ಸ್ವರ್ಣಾ ನದಿಗಳ ನೀರಿನಲ್ಲಿ ವಿವಿಧ ರೀತಿಯ ಆ್ಯಂಟಿ ಬಯೋಟಿಕ್ ಅಂಶಗಳು ಪತ್ತೆಯಾಗಿರುವ ಆಘಾತಕಾರಿ ವಿಚಾರವು ತಜ್ಞರ ತಂಡ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯ ರಿಂಗ್ ವಿಭಾಗದ ಭೂವಿಜ್ಞಾನ ಪ್ರಾಧ್ಯಾಪಕ ಪ್ರೊ. ಕೆ.ಬಾಲಕೃಷ್ಣ ನೇತೃತ್ವದಲ್ಲಿ ಕೇರಳ ಇರಿಂಜಲಕಾಡು ಕ್ರೈಸ್ಟ್ ಇಂಜಿನಿಯರಿಂಗ್ ಕಾಲೇಜು, ಕೆನಡಾ ವಾಟರ್‌ಲೂ ವಿವಿ, ಜಪಾನ್ ನ್ಯಾಶನಲ್ ಇನ್‌ಸ್ಟಿಟ್ಯೂಟ್‌ನ ಐದು ಮಂದಿ ತಜ್ಞರ ತಂಡ ಕಳೆದ ಏಳೆಂಟು ವರ್ಷಗಳಿಂದ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ‘ಎನ್‌ವೈಯರ್‌ಮೆಂಟಲ್ ಮೊನಿಟರಿಂಗ್ ಆ್ಯಂಡ್ ಅಸ್ಸೆಸ್‌ಮೆಂಟ್’ ಎಂಬ ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಜುಲೈ 17ಕ್ಕೆ ಪ್ರಕಟಿಸಿದೆ.

ಈ ನದಿಗಳ ನೀರಿನಲ್ಲಿ ಮನುಷ್ಯ ಹಾಗೂ ಜಲಚರಗಳಿಗೆ ದೀರ್ಘಾವಧಿ ಯಲ್ಲಿ ಹಾನಿಕಾರಕವಾದ ಟ್ರೈಮೆಥೋಪ್ರಿಂ, ಸಲ್ಫಾಮಿತೋಕ್ಸಾಜ್ಹೋಲ್, ಕ್ಲೋರಾಮ್ಫೆನಿಕಾಲ್, ಸೆಫ್ಟ್ರಿಯಾಕ್ಸೋನ್, ನೆಪ್ರಾಕ್ಸಿನ್ ಎಂಬ ಆ್ಯಂಟಿಬಯೋ ಟಿಕ್ ಅಂಶಗಳಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಮಳೆಗಾಲ ಮತ್ತು ಬೇಸಿಗೆಯಲ್ಲಿ ಸ್ವರ್ಣಾನದಿಯ ಬಜೆ ಡ್ಯಾಂನಿಂದ ಸಮುದ್ರಕ್ಕೆ ಸೇರುವ ಕೋಡಿ ಬೆಂಗ್ರೆಯವರೆಗಿನ 6 ಪ್ರದೇಶಗಳಲ್ಲಿ ಮತ್ತು ನೇತ್ರಾವತಿ ನದಿಯಲ್ಲಿ ತುಂಬೆಡ್ಯಾಂ ನಿಂದ ಬೋಳಾರ್‌ವರೆಗಿನ 6 ಪ್ರದೇಶಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಗೊಳಪಡಿಸಲಾಗಿದೆ.

ಈ ನೀರಿನಲ್ಲಿ ಆ್ಯಂಟಿಬಯೋಟಿಕ್ ಒಂದು ಲೀಟರ್‌ಗೆ 5-10ನ್ಯಾನೋ ಗ್ರಾಮ್‌ನಷ್ಟು ಸೂಕ್ಷ್ಮ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಸ್ವರ್ಣಾ ನದಿಗೆ ಹೋಲಿಸಿದರೆ ನೇತ್ರಾವತಿಯಲ್ಲಿ ಆ್ಯಂಟಿಬಯೋಟಿಕ್ ಅಂಶ ಹೆಚ್ಚಿನ ಪ್ರಮಾಣ ದಲ್ಲಿದೆ. ಬೇಸಿಗೆಗಿಂತ ಮಳೆಗಾಲದಲ್ಲಿ ಆ್ಯಂಟಿಬಯೋಟಿಕ್ ಅಂಶಗಳು ತೀರಾ ಕಡಿಮೆ ಪ್ರಮಾಣದಲ್ಲಿರುವುದು ಕಂಡುಬಂದಿದೆ.

ಮನುಷ್ಯ, ಜಲಚರಗಳಿಗೆ ಅಪಾಯ

ನದಿಗಳ ಇಕ್ಕೆಲಗಳಲ್ಲಿರುವ ಕಾರ್ಖಾನೆ, ಕೋಳಿಫಾರಂ, ಗದ್ದೆಗೆ ಬಳಸುವ ರಾಸಾಯನಿಕ, ವಿದ್ಯಾಸಂಸ್ಥೆಗಳು, ನಗರವಾಸಿ ಮನೆಗಳ ತ್ಯಾಜ್ಯ ನೀರಿನ ಮೂಲಕ ಈ ಆ್ಯಂಟಿಬಯೋಟಿಕ್ ಅಂಶಗಳು ನದಿಯ ಒಡಲು ಸೇರುತ್ತಿವೆ ಎಂಬುದು ಈ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಸದ್ಯ ಆ್ಯಂಟಿಬಯೋಟಿಕ್ ಅಂಶ ಹಾನಿಯಾಗುವ ಪ್ರಮಾಣದಲ್ಲಿ ಇಲ್ಲದಿ ದ್ದರೂ, ಕೈಗಾರಿಕೆ ಸೇರಿದಂತೆ ವಿವಿಧ ಮೂಲಗಳಿಂದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಕರಾವಳಿಯ ಜೀವನದಿಗಳಿಗೆ ಸೇರುತ್ತಿವೆ ಎಂಬುದಕ್ಕೆ ಈ ಅಧ್ಯಯನವು ಬಹಳ ಮುಖ್ಯ ಪುರಾವೆಯಾಗಿದೆ ಎನ್ನುತ್ತಾರೆ ಅಧ್ಯಯನ ತಂಡದ ಮುಖ್ಯಸ್ಥ ಪ್ರೊ.ಕೆ.ಬಾಲಕೃಷ್ಣ.

ಮನುಷ್ಯ ದೇಹದಲ್ಲಿರುವ ಆ್ಯಂಟಿ ಬಯೋಟಿಕ್‌ಗಳು ಕೂಡ ನದಿ ಪಾಲಾಗು ತ್ತಿವೆ. ಮನುಷ್ಯ ಸೇವಿಸುವ ಆ್ಯಂಟಿಬಯೋಟಿಕ್‌ನಲ್ಲಿ ಕೇವಲ ಶೇ.8-10ರಷ್ಟು ಮಾತ್ರ ಆ್ಯಂಟಿಬಯೋಟಿಕ್ ರೋಗ ಗುಣಪಡಿಸಲು ಬಳಕೆಯಾಗುತ್ತದೆ. ನಮ್ಮಲ್ಲಿರುವ ನೀರು ಶುದ್ದೀಕರಣ ಘಟಕಗಳಲ್ಲಿ ಆ್ಯಂಟಿಬಯೋಟಿಕ್ ನಾಶ ಪಡಿಸುವ ತಂತ್ರಜ್ಞಾನ ಇಲ್ಲದ ಪರಿಣಾಮ ಮನುಷ್ಯ ದೇಹದಲ್ಲಿರುವ ಉಳಿದ ಶೇ.80-90ರಷ್ಟು ಆ್ಯಂಟಿಬಯೋಟಿಕ್ ಮೂತ್ರದ ಮೂಲಕ ಹೊಳೆ ಸೇರುತ್ತವೆ.

ಇದು ಈ ಹೊಳೆಯ ನೀರನ್ನು ಸೇವಿಸುವ ಮನುಷ್ಯರಿಗೆ ಹಾಗೂ ನೀರಿ ನಲ್ಲಿರುವ ಜಲಚರಗಳಿಗೆ ಭವಿಷ್ಯದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಗಳಿವೆ. ಜಲಚರಗಳ ಸಂತಾನೋತ್ಪತ್ತಿಗೂ ಮಾರಕವಾಗಲಿದೆ ಎಂದು ಪ್ರೊ.ಕೆ.ಬಾಲಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕಾಗಿ ಸಂಶೋಧನೆ

ಆ್ಯಂಟಿಬಯೋಟಿಕ್ ಅಂಶಗಳು ನದಿಯನ್ನು ಸೇರದಂತೆ ತಡೆಯುವ ನಿಟ್ಟಿನಲ್ಲಿಯೂ ಈ ತಂಡ ವಿವಿಧ ರೀತಿಯ ಸಂಶೋಧನೆಯಲ್ಲಿ ತೊಡಗಿಸಿ ಕೊಂಡಿದೆ. ಮುಂಬೈಯ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್‌ನೊಂದಿಗೆ ಸೇರಿ ಈ ಪ್ರಾಜೆಕ್ಟ್ ವಹಿಸಿಕೊಳ್ಳಲಾಗಿದೆ.

ಕಲುಷಿತ ನೀರನ್ನು ಹೊಳೆಗೆ ಬಿಡುವ ಮೊದಲು ಆ ನೀರಿಗೆ ವಿಕಿರಣಗಳನ್ನು ಹಾಯಿಸುವ ಮೂಲಕ ಅದರಲ್ಲಿರುವ ಆ್ಯಂಟಿಬಯೋಟಿಕ್ ಅಂಶ ಗಳನ್ನು ನಾಶ ಪಡಿಸುವಂತಹ ಪ್ರಕ್ರಿಯೆ ಇದಾಗಿದೆ. ಇದರಿಂದ ನೀರು ಶುದ್ದವಾಗಿ ಹೊಳೆ ಸೇರಬಹುದಾಗಿದೆ. ತೀರಾ ಕಡಿಮೆ ಖರ್ಚಿನ ತಂತ್ರ ಜ್ಞಾನ ಇದಾಗಿದ್ದು, ಇದನ್ನು ನೀರು ಶುದ್ದೀಕರಣ ಘಟಕಗಳಲ್ಲಿ ಆಳವಡಿಸಿದರೆ ಆ್ಯಂಟಿಬಯೋಟಿಕ್ ನದಿ ಗಳನ್ನು ಸೇರದಂತೆ ತಡೆಯಬಹುದಾಗಿದೆ ಎಂದು ಪ್ರೊ.ಕೆ.ಬಾಲಕೃಷ್ಣ ಅಭಿ ಪ್ರಾಯ ಪಡುತ್ತಾರೆ.

ಅದೇ ರೀತಿ ಆ್ಯಂಟಿಬಯೋಟಿಕ್ ಅಂಶವನ್ನು ಹೀರಿಕೊಳ್ಳುವ ವಿಶೇಷ ಗುಣ ಹೊಂದಿರುವ ವೇಸ್ಟ್ ಕಾಟನ್‌ಗಳನ್ನು ಶುದ್ಧೀಕರಣ ಘಟಕಗಳಲ್ಲಿ ಬಳಸುವ ಮೂಲಕವೂ ಕಲುಷಿತ ನೀರನ್ನು ಶುದ್ಧ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಿಚಾರದಲ್ಲಿ ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂಬುದು ತಜ್ಞರ ಕಳಕಳಿಯಾಗಿದೆ.

ಏಳೆಂಟು ವರ್ಷಗಳಿಂದ ನಡೆಸುತ್ತಿರುವ ಈ ಅಧ್ಯಯನಕ್ಕೆ ಪೂರಕ ಮಾಹಿತಿ ಸಿಗದ ಕಾರಣ ವರದಿ ಪ್ರಕಟಿಸಲು ವಿಳಂಬವಾಗಿದೆ. ಆದರೆ ನಾವು ಪ್ರತಿವರ್ಷ ನೀರಿನ ಮಾದರಿಯ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಕಳೆದ ವರ್ಷ ಕೂಡ ಗುರುಪುರ ಹೊಳೆಯಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳ ಪಡಿಸಿದ್ದೇವೆ. ಸದ್ಯಕ್ಕೆ ನದಿಗಳಲ್ಲಿ ಆ್ಯಂಟಿಬಯೋಟಿಕ್ ಅಂಶಗಳು ಅಪಾಯಕಾರಿ ಮಟ್ಟವನ್ನು ತಲುಪದಿದ್ದರೂ ಭವಿಷ್ಯದ ದೃಷ್ಠಿಯಿಂದ ಬಹಳ ಎಚ್ಚರಿಕೆ ವಹಿಸು ವುದು ಅಗತ್ಯ. ಈ ಅಧ್ಯಯನ ವರದಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಕಳುಹಿಸಿಕೊಡಲಾಗುವುದು.
-ಪ್ರೊ.ಕೆ.ಬಾಲಕೃಷ್ಣ, ಭೂವಿಜ್ಞಾನ ಪ್ರಾಧ್ಯಾಪಕ, ಎಂಐಟಿ, ಮಣಿಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News