ಟಿಬೆಟ್‌ನಲ್ಲಿ ‘ಅಭೇದ್ಯ ಕೋಟೆ’ಯನ್ನು ನಿರ್ಮಿಸಬೇಕಾಗಿದೆ: ಜಿನ್‌ಪಿಂಗ್

Update: 2020-08-30 16:39 GMT

ಶಾಂಘೈ (ಚೀನಾ), ಆ. 30: ಟಿಬೆಟ್‌ನಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬರಲು, ರಾಷ್ಟ್ರೀಯ ಏಕತೆಯನ್ನು ರಕ್ಷಿಸಲು ಹಾಗೂ ‘ವಿಭಜನೆ’ ವಿರುದ್ಧದ ಹೋರಾಟದಲ್ಲಿ ಜನರಿಗೆ ಶಿಕ್ಷಣ ನೀಡಲು ಚೀನಾವು ‘ಅಭೇದ್ಯ ಕೋಟೆ’ಯೊಂದನ್ನು ನಿರ್ಮಿಸಬೇಕಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.

ಚೀನಾವು 1950ರಲ್ಲಿ ಟಿಬೆಟ್‌ನ್ನು ವಶಪಡಿಸಿಕೊಂಡಿತ್ತು. ಇದನ್ನು ‘ಶಾಂತಿಯುತ ವಿಮೋಚನೆ’ ಎಂದು ಬಣ್ಣಿಸಿದ್ದ ಅದು, ತನ್ನ ‘ಊಳಿಗಮಾನ್ಯ’ ಇತಿಹಾಸದಿಂದ ಹೊರಬರಲು ಟಿಬೆಟ್‌ಗೆ ಇದರಿಂದ ಸಾಧ್ಯವಾಗಿದೆ ಎಂದು ಹೇಳಿತ್ತು.

ಆದರೆ, ಚೀನಾವು ಟಿಬೆಟನ್ನು ವಶಪಡಿಸಿಕೊಂಡಿರುವುದು ‘ಸಾಂಸ್ಕೃತಿಕ ಜನಾಂಗೀಯ ಹತ್ಯೆ’ ಎಂಬುದಾಗಿ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಸೇರಿದಂತೆ ಟೀಕಾಕಾರರು ಹೇಳುತ್ತಾರೆ.

ಟಿಬೆಟ್‌ನ ಭವಿಷ್ಯದ ಸರಕಾರದ ಕುರಿತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಜಿನ್‌ಪಿಂಗ್, ಟಿಬೆಟ್‌ನಲ್ಲಿ ಮಾಡಲಾಗಿರುವ ಸಾಧನೆಗಳನ್ನು ಪ್ರಶಂಸಿಸಿದರು ಹಾಗೂ ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಶ್ಲಾಘಿಸಿದರು. ಆದರೆ, ವಲಯವನ್ನು ಸಮೃದ್ಧಗೊಳಿಸಲು, ಪುನಶ್ಚೇತನಗೊಳಿಸಲು ಹಾಗೂ ಏಕತೆಯನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನಗಳು ಆಗಬೇಕಾಗಿದೆ ಎಂದರು ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

‘‘ಪ್ರತಿಯೊಬ್ಬ ಯುವಜನರ ಹೃದಯದಾಳದಲ್ಲಿ ಚೀನಾವನ್ನು ಪ್ರೀತಿಸುವ ಬೀಜಗಳನ್ನು ನೆಡುವುದಕ್ಕಾಗಿ ಟಿಬೆಟ್‌ನ ಶಾಲೆಗಳಲ್ಲಿ ರಾಜಕೀಯ ಮತ್ತು ಸೈದ್ಧಾಂತಿಕ ಶಿಕ್ಷಣವನ್ನು ಬಲಪಡಿಸಬೇಕಾದ ಅಗತ್ಯವಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News