ರಶ್ಯಕ್ಕಾಗಿ ಬೇಹುಗಾರಿಕೆ; ಫ್ರಾನ್ಸ್ ಸೇನಾಧಿಕಾರಿ ಬಂಧನ
Update: 2020-08-30 22:35 IST
ಪ್ಯಾರಿಸ್, ಆ. 30: ನ್ಯಾಟೊ ನೆಲೆಯಲ್ಲಿ ನಿಯೋಜಿಸಲ್ಪಟ್ಟಿರುವ ಫ್ರಾನ್ಸ್‌ನ ಹಿರಿಯ ಸೇನಾಧಿಕಾರಿಯೊಬ್ಬರನ್ನು ರಶ್ಯಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ಆ ಸೇನಾಧಿಕಾರಿಯನ್ನು ಇಟಲಿಯಲ್ಲಿರುವ ನ್ಯಾಟೊ ಸಂಘಟನೆಯ ನೆಲೆಯೊಂದರಲ್ಲಿ ನಿಯೋಜಿಸಲಾಗಿತ್ತು ಎಂದು ನ್ಯಾಯಾಲಯದ ಮೂಲವೊಂದು ‘ಯುರೋಪ್ 1’ ರೇಡಿಯೊಗೆ ತಿಳಿಸಿದೆ. ಅವರು ಅಲ್ಲಿ ರಶ್ಯದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ರಶ್ಯನ್ ಭಾಷೆ ಮಾತಾಡಬಲ್ಲ ಶಂಕಿತನು, ರಶ್ಯದ ಸೇನಾ ಗುಪ್ತಚರ ವಿಭಾಗವಾಗಿರುವ ಜಿಆರ್‌ಯುನ ಏಜಂಟ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬನ ಜೊತೆ ಇಟಲಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ‘ಯುರೋಪ್ 1’ ರೇಡಿಯೊ ಹೇಳಿದೆ.