×
Ad

ನರಿಮೊಗರು: ಕಾರು-ಬೈಕ್ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಮೃತ್ಯು

Update: 2020-08-31 13:18 IST

ಪುತ್ತೂರು, ಆ.31: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಿಂದ ಬೈಕ್ ಸವಾರಿರಬ್ಬರು ಮೃತಪಟ್ಟ ಘಟನೆ ರವಿವಾರ ರಾತ್ರಿ ಪುತ್ತೂರು ತಾಲೂಕಿನ ನರಿಮೊಗರು ಶಾಲೆಯ ಬಳಿಯಲ್ಲಿ ನಡೆದಿದೆ. ಬೈಕ್ ಸವಾರ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟದಬೈಲು ಎಂಬಲ್ಲಿನ ನಿವಾಸಿ ಐತ್ತಪ್ಪಎಂಬವರ ಪುತ್ರ ಮಿಥುನ್(18) ಮತ್ತು ಸಹಸವಾರ, ಐತ್ತಪ್ಪರ ಸಹೋದರ ಉಮೇಶ್‌ರ ಪುತ್ರ ಭವಿತ್(19) ಮೃತಪಟ್ಟವರು.

 ಮಿಥುನ್ ನರಿಮೊಗರು ಐಟಿಐ ಕಾಲೇಜಿನ ವಿದ್ಯಾರ್ಥಿಯಾಗಿದ್ದರೆ, ಭವಿತ್ ಸೆಂಟ್ರಿಂಗ್ ಕಾರ್ಮಿಕರಾಗಿದ್ದರು. ವೀರಮಂಗಲ ಎಂಬಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇವರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟು ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳಿಬ್ಬರನ್ನೂ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಿ ಅವರಿಬ್ಬರೂ ಕೊನೆಯುಸಿರೆಳೆದಿದ್ದರೆನ್ನಲಾಗಿದೆ.

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಕಾರಿನ ಮುಂಭಾಗ ಜಖಂಗೊಂಡಿದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News