ಹೊಟೇಲ್ ಕೊಠಡಿ ವಿಚಾರದ ಅಸಮಾಧಾನದಿಂದ ಐಪಿಎಲ್ ನಿಂದ ಹೊರಬಂದ ರೈನಾ: ವರದಿ

Update: 2020-08-31 08:07 GMT

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿರುವ ಸುರೇಶ್ ರೈನಾ ಅವರು ತಮ್ಮ ತಂಡದ ಜತೆಗೆ ಇತ್ತೀಚೆಗೆ ದುಬೈಗೆ ತೆರಳಿದ್ದರಾದರೂ ದಿಢೀರನೇ ಶನಿವಾರ ಭಾರತಕ್ಕೆ ಮರಳಿದ್ದಾರೆ. ಅವರು `ವೈಯಕ್ತಿಕ ಕಾರಣಗಳಿಂದಾಗಿ' ಭಾರತಕ್ಕೆ ವಾಪಸಾಗಿದ್ದಾರೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕೆ ಎಸ್ ವಿಶ್ವನಾಥನ್ ಹೇಳಿದ್ದಾರೆ.

ಈ ಕುರಿತು ಅವರು ತಂಡದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ‍ನಲ್ಲಿ ಟ್ವೀಟ್ ಮಾಡಿದ್ದಾರಲ್ಲದೆ ರೈನಾ ಅವರು ಐಪಿಎಲ್‍ನ ಈ ವರ್ಷದ ಪಂದ್ಯಾವಳಿಗೆ ಲಭ್ಯರಿರುವುದಿಲ್ಲ ಎಂದಿದ್ದಾರೆ. ಆದರೆ ತಮಗೆ ನೀಡಲಾಗಿದ್ದ ಹೋಟೆಲ್ ಕೊಠಡಿಯಿಂದ ರೈನಾ ಸಂತುಷ್ಟರಾಗಿಲ್ಲವೆಂದು ವರದಿಯೊಂದು ಹೇಳಿದೆ. ತಂಡದ ಕಪ್ತಾನ ಎಂ ಎಸ್ ಧೋನಿ ಅವರಿಗೆ ನೀಡಲಾಗಿರುವ ಕೊಠಡಿಯಂತಹದ್ದೇ ಕೊಠಡಿಯನ್ನು ತನಗೆ ನೀಡಬೇಕೆಂದು ರೈನಾ ಬಯಸಿದ್ದರೆನ್ನಲಾಗಿದೆ.

ಈಗಾಗಲೇ ಇಬ್ಬರು ಆಟಗಾರರಿಗೆ  ಹಾಗೂ ತಂಡದ ಇತರ ಕೆಲ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಆಗಿರುವುದು ಒಂದೆಡೆಯಾದರೆ ಇನ್ನೊಂದೆಡೆ ಸುರೇಶ್ ರೈನಾ ದಿಢೀರನೇ ತಾಯ್ನಾಡಿಗೆ ಮರಳಿರುವುದು ತಂಡಕ್ಕೆ ಹೊಡೆತ ನೀಡಿದೆಯಾದರೂ ಈ ಕುರಿತು ಪ್ರತಿಕ್ರಿಯಿಸಿರುವ ತಂಡದ ಮಾಲಕ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, “ಕ್ರಿಕೆಟಿಗರು ಹಿಂದಿನ ಕಾಲದ ನಟರಂತೆ ಪ್ರೈಮಾ ಡೊನ್ನಾ (ಬಹಳ ಬೇಗ ಸಿಟ್ಟಾಗುವವರು) ತರಹ ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಯಾವತ್ತೂ  ಒಂದು ಕುಟುಂಬದಂತೆ, ಎಲ್ಲಾ ಹಿರಿಯ ಆಟಗಾರರು ಜತೆಯಾಗಿಯೇ ಇದ್ದಾರೆ. ಆದರೆ ಯಾರಾದರೂ ಖುಷಿಯಾಗಿಲ್ಲದೇ ಇದ್ದರೆ ಅವರು ವಾಪಸಾಗಬಹುದು. ಯಾರ ಮೇಲೂ ಒತ್ತಡ ಹೇರುವುದಿಲ್ಲ, ಆದರೆ ಕೆಲವೊಮ್ಮೆ  ಯಶಸ್ಸು ತಲೆಗೇರುತ್ತದೆ, ಐಪಿಎಲ್ ಇನ್ನೂ ಆರಂಭಗೊಂಡಿಲ್ಲ ತಾನೇನು ಕಳೆದುಕೊಳ್ಳುತ್ತೇನೆ ಹಾಗೂ ಎಷ್ಟು ಹಣ ಕಳೆದುಕೊಳ್ಳುತ್ತೇನೆ ( ರೂ 11 ಕೋಟಿ) ಎಂಬ ಕುರಿತು ರೈನಾಗೆ ಅರಿವಾಗುತ್ತದೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News