ರಾಜ್ಯದ ದೇವಸ್ಥಾನಗಳಲ್ಲಿ ವಿವಿಧ ಸೇವೆ; ಎರಡು ದಿನಗಳಲ್ಲಿ ನಿರ್ಧಾರ: ಕೋಟ ಶ್ರೀನಿವಾಸ ಪೂಜಾರಿ

Update: 2020-08-31 09:23 GMT

ಉಡುಪಿ, ಆ.31: ಕೊರೋನ ಹಿನ್ನೆಲೆಯಲ್ಲಿ ರಾಜ್ಯದ ದೇವಸ್ಥಾನಗಳಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ನಿಂತಿರುವ ವಿವಿಧ ಸೇವೆಗಳನ್ನು ಪುನರಾರಂಭಿಸುವ ಕುರಿತು ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಅನ್ನ ದಾಸೋಹ ಹಾಗೂ ಸಮಾರಂಭಗಳಿಗೆ ಅವಕಾಶವಿಲ್ಲ. ಕೆಲವು ಸೇವೆಗಳನ್ನು ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದೇವೆ ಎಂದರು.

ಒಳಾಂಗಣದ ಎಲ್ಲಾ ಸೇವೆ ಆರಂಭಕ್ಕೆ ಅನುಮತಿ ಕೋರಿ ಮನವಿ ಮಾಡಿದ್ದೇವೆ. ಸರಕಾರದಿಂದ ಅಧಿಕೃತ ಮಾಹಿತಿ ಹಾಗೂ ಅನುಮತಿ ಎರಡು ದಿನಗಳಲ್ಲಿ ಬರಬಹುದೆಂಬ ನಿರೀಕ್ಷೆ ಇದೆ ಎಂದವರು ಹೇಳಿದರು.

ಸಾಮಾಜಿಕ ಅಂತರ ಕಾಪಾಡುವ ಸೇವೆಗೆ ಮುಕ್ತ ಅವಕಾಶ ಇದೆ. ಚಿನ್ನದ ರಥ ಸೇವೆ, ಬೆಳ್ಳಿ ರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆದಿದೆ. ಕೋವಿಡ್- 19 ಮಾರ್ಗಸೂಚಿಯಾನುಸಾರ ನಮ್ಮ ಸೇವೆ ಪ್ರಾರಂಭಗೊಳ್ಳುತ್ತದೆ. ನೂರಾರು, ಸಾವಿರಾರು ಮಂದಿ ಸೇರಿ ಮಾಡುವ ಸೇವೆಗೆ ಸದ್ಯ ಅವಕಾಶವಿಲ್ಲ. ಕೇವಲ 10-15 ಮಂದಿ ಸೇರುವ ಧಾರ್ಮಿಕ ಸೇವೆ ನಡೆಸುವ ಚಿಂತನೆ ನಡೆದಿದೆ. ಕೋವಿಡ್ ನಿಯಮದ ಮಿತಿಯೊಳಗೆ ಎಲ್ಲಾ ಸೇವೆಗಳೂ ಇರುತ್ತವೆ ಎಂದು ಕೋಟ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News