ದಾಖಲೆ ಬರೆದ ಆರ್ಥಿಕ ಕುಸಿತ: ಜಿಡಿಪಿ -23.9 ಶೇ. ಇಳಿಕೆ

Update: 2020-08-31 17:29 GMT

ಹೊಸದಿಲ್ಲಿ, ಸೆ.1: ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿ ( ಎಪ್ರಿಲ್‌ನಿಂದ ಜೂನ್‌ವರೆಗೆ)ಯಲ್ಲಿ ಭಾರತದ ಜಿಡಿಪಿ -23.9 ಶೇ. ಕುಸಿತ ಕಂಡಿದ್ದು, ಇದು ಈವರೆಗಿನ ದಾಖಲೆ ಕುಸಿತವಾಗಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯ ಅಂಕಿಅಂಶ ತಿಳಿಸಿದೆ.

1996ರಲ್ಲಿ ಭಾರತ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ತ್ರೈಮಾಸಿಕ ಅಂಕಿ ಅಂಶ ಪ್ರಕಟಿಸಲು ಆರಂಭಿಸಿದ ಬಳಿಕದ ಅತ್ಯಂತ ಬೃಹತ್ ಕುಸಿತ ಮತ್ತು ಏಶ್ಯದ ಪ್ರಮುಖ ಆರ್ಥಿಕತೆಗೆ ಹೋಲಿಸಿದರೆ ಅತ್ಯಂತ ಕೆಟ್ಟ ಫಲಿತಾಂಶ ಇದಾಗಿದೆ. ಕೊರೋನ ಸೋಂಕು ಹಾಗೂ ಲಾಕ್‌ ಡೌನ್‌ ನಿಂದಾಗಿ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. 2019ರ ಜೂನ್ 30ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ದರ ಶೇ.5.2 ಮತ್ತು 2019ರ ಡಿಸೆಂಬರ್ 31ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ದರ ಶೇ.3.1 ದಾಖಲಾಗಿತ್ತು.

ಸೋಮವಾರ ಬಿಡುಗಡೆಗೊಳಿಸಿರುವ ಅಂಕಿಅಂಶ, ದೇಶದಲ್ಲಿ ಇದುವರೆಗೆ ದಾಖಲಾಗಿರುವ ಅತ್ಯಧಿಕ ಆರ್ಥಿಕ ಹಿಂಜರಿತ(ಕುಸಿತ)ದ ಪ್ರಕರಣವಾಗಿದ್ದು, ಈ ವಿತ್ತ ವರ್ಷದ ದ್ವಿತೀಯ ಅವಧಿಯಲ್ಲೂ ಇದೇ ಲಕ್ಷಣ ಮುಂದುವರಿಯುವ ನಿರೀಕ್ಷೆಯಿದೆ. ಕೊರೋನ ಸೋಂಕು ಬಿಕ್ಕಟ್ಟಿನಿಂದ ಎದುರಾಗಿರುವ ಆಘಾತದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದಿರುವ ಆರ್ಥಿಕ ಚಟುವಟಿಕೆ ಮತ್ತು ಬೇಡಿಕೆ ಕುಸಿದಿರುವುದು ಇದಕ್ಕೆ ಕಾರಣವಾಗಿದೆ. ಸರಕಾರ ಕ್ರಮೇಣ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದೆಯಾದರೂ, ಉದ್ಯಮಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸದ ಕಾರಣ ಅಥವಾ ಶೇ.50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಕಾರ್ಖಾನೆಗಳು ನಿರ್ಧರಿಸಿದ್ದರಿಂದ ಬಹುತೇಕ ಕಾರ್ಮಿಕರು ಮನೆಯಲ್ಲೇ ಇರುವಂತಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗೆ ತೊಡಕಾಗಿದೆ. ಬ್ಲೂಮ್‌ ಬರ್ಗ್ ಸುದ್ದಿಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಆರ್ಥಿಕ ತಜ್ಞರು, ಜೂನ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ.15ದಿಂದ ಶೇ.25.9 ಪ್ರಮಾಣದಲ್ಲಿ ಜಿಡಿಪಿ ಕುಸಿತವಾಗಲಿದೆ ಎಂದು ಅಂದಾಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News