×
Ad

ಉಡುಪಿ : ಬಿಜೆಪಿ ನಾಯಕಿಯ ಪುತ್ರ ಸೇರಿ ತಂಡದಿಂದ ಹೊಟೇಲ್ ಸುಪರ್‌ವೈಸರ್‌ಗೆ ಮಾರಣಾಂತಿಕ ಹಲ್ಲೆ ; ದೂರು

Update: 2020-08-31 21:01 IST

ಮಣಿಪಾಲ, ಆ.31: ಉಡುಪಿ ನಗರಸಭೆ ಬಿಜೆಪಿ ಸದಸ್ಯೆಯೊಬ್ಬರ ಮಗ ಸೇರಿದಂತೆ ಯುವಕರ ತಂಡವೊಂದು ಮಣಿಪಾಲದ ಆಶ್ಲೇಷ್ ಹೊಟೇಲ್‌ನ ಸುಪರ್‌ವೈಸರ್‌ಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ನಗರಸಭೆ ಸದಸ್ಯೆಯ ಮಗ ರಕ್ಷಿತ್, ಮಹಾನ್ ರಾವ್, ಅಕ್ಷಯ್ ವಿ.ಕೆ., ಪವನ್ ರಾಜ್, ಪರ್ಕಳದ ಮಾವಿಲ್, ಅಮಿತ್, ಪ್ರಕಾಶ್ ಮತ್ತು ಇತರರು ಆ.30ರ ತಡರಾತ್ರಿಯವರೆಗೆ ಹೊಟೇಲ್ ಆಶ್ಲೇಷ್ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ವಿಚಾರವನ್ನು ಹೊಟೇಲ್‌ನ ಸುಪರ್‌ವೈಸರ್ ಅವಿನಾಶ್ ಪೈ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ಮಧ್ಯರಾತ್ರಿ ಬಳಿಕ ಮನೆಗೆ ತೆರಳುತ್ತಿದ್ದ ಅವಿನಾಶ್ ಪೈಗೆ ಆರೋಪಿಗಳು, ಹಲ್ಲೆ ನಡೆಸಿ, ಕುತ್ತಿಗೆಯನ್ನು ಒತ್ತಿ ಹಿಡಿದು ಕೊಲೆಗೆ ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಅಲ್ಲದೆ ಕೋಲಿನಿಂದ ತಲೆಗೆ ಹೊಡೆದು ಗಾಯ ಗೊಳಿಸಿದ್ದಾರೆ. ಸ್ಥಳಕ್ಕೆ ಸೆಕ್ಯುರಿಟಿ ಗಾರ್ಡ್ ಬರುವಾಗ ಆರೋಪಿಗಳು ಕಾರು ಮತ್ತು ಬೈಕಿನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News