ಕಲಾಂಗಣದ ಪ್ರಮುಖ ಪೋಷಕ ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ನಿಧನ
ಮಂಗಳೂರು, ಸೆ.1: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಪ್ರವರ್ತಿತ ಕಲಾಂಗಣದ ಪ್ರಮುಖ ಪೋಷಕ ರೆ.ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ಅವರು ಮುಂಬೈಯ ಡೊಕ್‌ಯಾರ್ಡ್‌ನ ರೋಸರಿ ಚರ್ಚಿನ ವಸತಿಗೃಹದಲ್ಲಿ ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಬುಧವಾರ ಸಂತ ಆಂಡ್ರ್ಯೂ ಚರ್ಚ್ ಬೆಂಡ್ರಾದಲ್ಲಿ ಅವರ ಅಂತಿಮ ಕ್ರಿಯೆ ನಡೆಯಲಿದೆ ಎಂದು ಮುಂಬಯಿ ಆರ್ಚ್ ಡಯಾಸಿಸ್‌ನ ಪ್ರಕಟನೆ ತಿಳಿಸಿದೆ.
1996ರಲ್ಲಿ ಕಟ್ಟಲು ಆರಂಭವಾದ ಕಲಾಂಗಣ ಕಟ್ಟಡದ ಮಹತ್ವ ಅರಿತು, ಕಲೆ ಸಂಸ್ಕೃತಿಯ ಪ್ರೇಮಿಯಾಗಿದ್ದ ಫಾ. ರಮೇಶ್ ತನ್ನ ಮಿತ್ರರಿಂದ ಧನ ಸಂಗ್ರಹ ಮಾಡಿ, ಕಟ್ಟಡ ಪೂರ್ಣಗೊಳಿಸಲು ನೆರವಾಗಿದ್ದರು. ಅವರ ಈ ಸೇವೆಯನ್ನು ಗುರುತಿಸಿ ಸಭಾಂಗಣವನ್ನು ಅವರ ತಾಯಿ ಗ್ರೇಸಿ ಗಂಗಾ ನಾಯ್ಕ್ ಬಂದೋಡ್ಕರ್ ಹೆಸರಿಗೆ ಅರ್ಪಿಸಲಾಗಿದೆ. ಅವರು ಕಲಾಂಗಣ ಕಟ್ಟಡ ಸಮಿತಿಯ ಪ್ರಧಾನ ಪೋಷಕರಾಗಿ ಹಾಗೂ ಮಾಂಡ್ ಸೊಭಾಣ್ ಕಾರ್ಯಕಾರಿ ಸಮಿತಿಯ ಪದನಿಮಿತ್ತ ಸದಸ್ಯರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದ್ದರು.
ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ಅವರ ನಿಧನಕ್ಕೆ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಕಲಾಂಗಣ ಅಧ್ಯಕ್ಷ ರೊನಾಲ್ಡ್ ಮೆಂೊನ್ಸಾ ಸಂತಾಪ ವ್ಯಕ್ತಪಡಿಸಿದ್ದಾರೆ.