×
Ad

ಗಡಿ ನಿರ್ಬಂಧ ಸಂಪೂರ್ಣ ತೆರವು: ಕಾಸರಗೋಡು ಜಿಲ್ಲಾಧಿಕಾರಿ

Update: 2020-09-02 20:31 IST
ಸಾಂದರ್ಭಿಕ ಚಿತ್ರ

ಕಾಸರಗೋಡು ಸೆ.2: ಉದ್ಯೋಗಕ್ಕಾಗಿ ಕಾಸರಗೋಡಿನಿಂದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ತೆರಳುವರಿಗೆ ಯಾವುದೇ ಅಡ್ಡಿ ಇಲ್ಲ. ಪಾಸ್, ನೋಂದಣಿ ನಡೆಸುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ. ಅವರು ಬುಧವಾರ ನಡೆದ ಕೊರೋನ ಸಲಹಾ ಸಮಿತಿ ಆನ್‌ಲೈನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೋವಿಡ್-19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ನಡೆಸಿದವರಿಗೆ ರಾಷ್ಟ್ರೀಯ ಹೆದ್ದಾರಿ-66 ಅಲ್ಲದೆ ಸಂಚಾರಕ್ಕೆ ಮುಕ್ತಗೊಳಿಸಲಾದ ರಸ್ತೆಗಳ ಮೂಲಕ ಸಂಚರಿಸಲು ಅಡ್ಡಿಯಿಲ್ಲ ಎಂದು ತಿಳಿಸಿದರು.

ಕರ್ನಾಕಟದಲ್ಲೇ ನೆಲೆಸಿ ಕಾಸರಗೋಡು ಜಿಲ್ಲೆಗೆ ದಿನಂಪ್ರತಿ ಆಗಮಿಸುವವರು 21 ದಿನಗಳಿಗೊಮ್ಮೆ ಆ್ಯಂಟಿಜನ್ ತಪಾಸಣೆ ನಡೆಸಿ, ಕೋವಿಡ್ ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ಇವರು ತಲಪಾಡಿ ಅಲ್ಲದೆ ಜಾಲ್ಸೂರು, ಪೆರ್ಲ, ಪಾಣತ್ತೂರು, ಮಾಣಿಮೂಲೆ-ಬಂದಡ್ಕ ರಸ್ತೆ ಮೂಲಕವೂ ಕರ್ನಾಟಕಕ್ಕೆ ಸಂಚರಿಸಬಹುದು ಎಂದರು.

ಸರಕು ಸಹಿತ ಎಲ್ಲ ವಾಹನಗಳಿಗೆ ಈ ರಸ್ತೆಗಳಲ್ಲಿ ಸಂಚರಿಸಬಹುದಾಗಿದ್ದು, ಕೇಂದ್ರ ಅರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ಆದೇಶದಂತೆ 14 ದಿನಗಳ ಕ್ವಾರಂಟೈನ್ ಅನಿವಾರ್ಯ. ತುರ್ತು ಅಗತ್ಯಕ್ಕೆ ಕರ್ನಾಟಕಕ್ಕೆ ತೆರಳಿ 24 ಗಂಟೆಯೊಳಗೆ ಮರಳುವವರಿಗೆ ಕ್ವಾರಂಟೈನ್ ಅಗತ್ಯ ಇಲ್ಲ. ಅಲ್ಲದೆ ಗಡಿಯ ಗ್ರಾಪಂ ವ್ಯಾಪ್ತಿಯಲ್ಲಿ ವಾಸವಾಗಿರುವವರಿಗೆ ಗುರುತು ಚೀಟಿ ತೋರಿಸಿ ತೆರಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ವೈಎಸ್ಪಿ ಬಾಲಕೃಷ್ಣನ್ ನಾಯರ್ ಪಿ. ಹಾಗೂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News