ಪೇಜಾವರಶ್ರೀಗಳ 33ನೇ ಚಾತುರ್ಮಾಸ್ಯ ಮುಕ್ತಾಯ

Update: 2020-09-02 15:32 GMT

ಬ್ರಹ್ಮಾವರ, ಸೆ.2: ನೀಲಾವರ ಗೋಶಾಲೆಯಲ್ಲಿರುವ ತಮ್ಮ ಶಾಖಾ ಮಠದಲ್ಲಿ 33ನೇ ಚಾತುರ್ಮಾಸ್ಯ ವೃತವನ್ನು ನಡೆಸುತ್ತಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ವೃತವನ್ನು ಸಮಾಪ್ತಿಗೊಳಿಸಿದರು. ಬೆಳಗ್ಗೆ ಪಟ್ಟದೇವರಾದ ಶ್ರೀರಾಮವಿಠಲ ದೇವರಿಗೆ ಮಹಾಪೂಜೆ ನೆರವೇರಿಸಿದ ಬಳಿಕ ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುಮಾರ್ಸ್ಯ ಮೃತ್ತಿಕಾ ವಿಸರ್ಜನೆ ಗೈದರು.

ಅಪರಾಹ್ನ ಗೋಶಾಲೆಯಿಂದ ತಮ್ಮ ಶಿಷ್ಯರೊಡಗೂಡಿ ಮಹಿಳೆಯರ ಭಜನೆ, ವಿದ್ಯಾರ್ಥಿಗಳ ಮಂತ್ರಘೋಷಗಳೊಂದಿಗೆ ಸಮೀಪದಲ್ಲಿರುವ ಸೀತಾನದಿ ತೀರಕ್ಕೆ ಆಗಮಿಸಿ ಅಲ್ಲಿ ನೀಲಾವರ, ಚೇರ್ಕಾಡಿ, ಪೇತ್ರಿ, ಆರೂರು ಗ್ರಾಮಗಳ, ಬ್ರಹ್ಮಾವರ ತಾಲೂಕು ಪಂಚಾಯತ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ, ಬ್ರಹ್ಮಾವರ ಬ್ರಾಹ್ಮಣ ಸಂಘಗಳ ಪರವಾಗಿ ಶ್ರೀಗಳಿಗೆ ಗೌರವಾರ್ಪಣೆ ನೆರವೇರಿತು.

ಬಳಿಕ ಸೀತಾನದಿಗೆ ಸೀಯಾಳ, ಪುಷ್ಪಾರ್ಪಣೆಸಹಿತ ಮಂಗಳಾರತಿ ಬೆಳಗಿದರು. ಸಾಲಂಕೃತ ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿದರು. ಮರಳಿ ಬಂದು ಗ್ರಾಮದೇವತೆ ಮಹಿಷಮರ್ದಿನೀ ದೇವಳಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ದೇವಳದ ಪರವಾಗಿ ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ ಮಧ್ಯಸ್ಥ, ಪ್ರಧಾನ ಅರ್ಚಕ ಕೃಷ್ಣ ಅಡಿಗ ಹಾಗೂ ಇತರರು ಶ್ರೀಗಳನ್ನು ಬರಮಾಡಿಕೊಂಡು ದೇವಳದ ಪರವಾಗಿ ಗೌರವ ಅರ್ಪಿಸಿದರು. ಅಲ್ಲಿಂದ ಉಡುಪಿಗೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಂಡಿತು.

ಇದೇ ಸಂದರ್ಭ ಬಾರ್ಕೂರಿನ ಶ್ರೀಏಕನಾಥೇಶ್ವರೀ ದೇವಸ್ಥಾನದ ಹವ್ಯಾಸಿ ಯಕ್ಷಗಾನ ಸಂಘದ ಕಲಾವಿದರು ದಂಡಕ ದಮನ ಯಕ್ಷಗಾನ ಪ್ರಸಂದ ತಾಳಮದ್ದಲೆ ನಡೆಸಿಕೊಟ್ಟರು.

ಚಾತುರ್ಮಾಸ್ಯ ವೈಶಿಷ್ಯ

ಶ್ರೀವಿಶ್ವೇಶತೀರ್ಥ ಶ್ರೀಪಾದರ ಕಾಲಾನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಶ್ರೀವಿಶ್ವಪ್ರಸನ್ನ ತೀರ್ಥರ ಮೊದಲ ಚಾತುರ್ಮಾಸ್ಯ ಇದಾಗಿದೆ. ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿ ಶ್ರೀಗಳ ಮೊದಲ ಚಾತುರ್ಮಾಸ್ಯ.

ಸೀಮೋಲ್ಲಂಘನೆಗೆ ಮೊದಲು ಸೀತಾನದಿಗೆ ಹಾಲೆರೆದು ಪುಷ್ಪ ಅರ್ಪಿಸಿ ಮಂಗಳಾರತಿ ಬೆಳಗಿದರು. ಸ್ಥಳೀಯರಾದ ವಿಠಲ ಪೂಜಾರಿ ತಮ್ಮ ದೋಣಿಯನ್ನು ಅಲಂಕರಿಸಿ ಸ್ವಾಮೀಜಿ ಅವರನ್ನು ಶ್ರೀರಾಮದೇವರ ಮೂರ್ತಿ ಸಹಿತ ಕುಳ್ಳಿರಿಸಿ, ನದಿಯ ಆಚೆ ದಡದವರೆಗೆ ಕರೆದುಕೊಂಡು ಹೋಗಿ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News