×
Ad

ನ್ಯಾಯಾಲಯದ ಆದೇಶದಂತೆ ಹಸು-ಕರು ಸಾಗಿಸುತ್ತಿದ್ದ ವಾಹನಕ್ಕೆ ಸಂಘ ಪರಿವಾರದಿಂದ ತಡೆ

Update: 2020-09-02 22:25 IST

ಪುತ್ತೂರು, ಸೆ.2: ಅಕ್ರಮ ಸಾಗಾಟದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಹಸು ಮತ್ತು ಕರುವನ್ನು ನ್ಯಾಯಾಲಯದ ಆದೇಶ ಪಡೆದು ಸಾಗಿಸುತ್ತಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕಳೆದ ಆಗಸ್ಟ್ 20ರಂದು ಇರ್ದೆ ಗ್ರಾಮದ ಚೆಲ್ಯಡ್ಕ ಎಂಬಲ್ಲಿ ಮಾರುತಿ ಓಮ್ನಿ ಕಾರಿನಲ್ಲಿ ಹಸು ಮತ್ತು ಕರುವನ್ನು ಕೊಂಡೊಯ್ಯುತ್ತಿದ್ದ ವೇಳೆ ಅಕ್ರಮ ಗೋ ಸಾಗಾಟದ ಆರೋಪದಲ್ಲಿ ಅವುಗಳನ್ನು ಸಂಪ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಗುಮ್ಮಟಗದ್ದೆ ನಿವಾಸಿ ಬಾಲಕೃಷ್ಣ ಗೌಡ ಮತ್ತು ಆರ್ಲಪದವು ನಿವಾಸಿ ಮೂಸಾ ಎಂಬವರನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಈ ನಡುವೆ ಮೂಸಾ ಅವರು ಪೊಲೀಸರು ವಶಪಡಿಸಿಕೊಂಡಿರುವ ಹಸು ಮತ್ತು ಕರುವನ್ನು ತನಗೆ ಹಿಂದಿರುಗಿಸುವಂತೆ ಕೋರಿ ನ್ಯಾಯವಾದಿ ಎಂ.ರಮ್ಲತ್ ಮೂಲಕ ಪುತ್ತೂರು ಎಡಿಷನಲ್ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಹಸು ಮತ್ತು ಕರುವನ್ನು ಅರ್ಜಿದಾರ ಮೂಸಾರಿಗೆ ಹಿಂದಿರುಗಿಸುವಂತೆ ಆದೇಶಿಸಿತ್ತು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹಸು ಮತ್ತು ಕರುವನ್ನು ಮಂಗಳವಾರ ರಾತ್ರಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ವಾಹನವನ್ನು ಸಂಘ ಪರಿವಾರದ ಕಾರ್ಯಕರ್ತರು ತಡೆದಿದ್ದಾರೆನ್ನಲಾಗಿದೆ. ನ್ಯಾಯಾಲಯದ ಆದೇಶದಂತೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿ ನ್ಯಾಯಾಲದ ಆದೇಶದ ಪ್ರತಿಯನ್ನು ತೋರಿಸಿದರೂ ದುಷ್ಕರ್ಮಿಗಳು ವಾಹನವನ್ನು ಸಂಚರಿಸಲು ಬಿಡಲಿಲ್ಲ ಎನ್ನಲಾಗಿದೆ.

ಘಟನೆಯ ಕುರಿತು ಮಾಹಿತಿ ಹರಡುತ್ತಿದ್ದಂತೆಯೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸಂಘ ಪರಿವಾರದ ಕಾರ್ಯಕರ್ತರು ವಾಹನಕ್ಕೆ ಅಡ್ಡಿಪಡಿಸುವುದನ್ನು ಕೈಬಿಟ್ಟರು. ಈ ವೇಳೆ ನಾವು ನ್ಯಾಯಾಲಯದ ಆದೇಶದಂತೆ ಹಸು-ಕರುವನ್ನು ಸಾಗಿಸುತ್ತಿರುವುದಾಗಿ ಹೇಳಿದ್ದರೂ ಅಡ್ಡಿಪಡಿಸಲಾಗಿದೆ. ಆದ್ದರಿಂದ ಸಂಪ್ಯ ಠಾಣಾ ಎಸ್ಸೈ ಸ್ಥಳಕ್ಕಾಗಮಿಸಿದ ಬಳಿಕವಷ್ಟೇ ನಾವು ತೆರಳುವುದಾಗಿ ಸಾಗಾಟಗಾರರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಸಂಪ್ಯ ಠಾಣಾ ಎಸ್ಸೈ ಉದಯರವಿ ಹಾಗೂ ಸಿಬ್ಬಂದಿ ಜಮಾಯಿಸಿದ್ದ ಎರಡೂ ಸಮುದಾಯಗಳ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News