ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಎಂಟು ಮಂದಿ ನಾಮನಿರ್ದೇಶಿತ ಸದಸ್ಯರು
ಉಡುಪಿ, ಸೆ.3: ಜಿಲ್ಲೆಯ ಎಂಟು ಮಂದಿ ಸದಸ್ಯರನ್ನು ನಾಮ ನಿರ್ದೇಶನ ಗೊಳಿಸುವ ಮೂಲಕ ರಾಜ್ಯ ಸರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ರಚಿಸಿ ಆದೇಶ ಹೊರಡಿಸಿದೆ.
ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ತಹಶೀಲ್ದಾರ್ ಅವರು ಪದನಿಮಿತ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವರು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಳಿದಂತೆ ಸರಕಾರ ಎಂಟು ಮಂದಿಯನ್ನು ನಾಮ ನಿರ್ದೇಶನಗೊಳಿಸಿ ಆದೇಶಿಸಿದೆ.
ಸದಸ್ಯರು: ಆಗಮ ವಿಭಾಗದಿಂದ ಹೆರ್ಗ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ದ ಹರಿಪ್ರಸಾದ್ ಭಟ್ ಪಿ., ವೇದ ವಿಭಾಗದಿಂದ ಕಾರ್ಕಳ ತಾಲೂಕು ಸಾಣೂರು ಮಹಾಲಿಂಗೇಶ್ವರ ದೇವಸ್ಥಾನ ದೇನಬೆಟ್ಟು ಇದರ ಪ್ರಧಾನ ಅರ್ಚಕ ರಾಮ್ ಭಟ್, ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ದಿಂದ ಹಂಗಾರಕಟ್ಟೆ ಬಾಳ್ಕುದ್ರುನ ವಾಸುದೇವ ಹಂಗಾರಕಟ್ಟೆ.
ಮಹಿಳಾ ವಿಭಾಗದಿಂದ ಸಾಲಿಗ್ರಾಮ ಪಾರಂಪಳ್ಳಿ ಡಾಲರ್ಸ್ ಕಾಲನಿಯ ಶಾಲಿನಿ ಸುರೇಶ್ ಗಾಣಿಗ, ಹಿಂದುಳಿದ ವರ್ಗದಿಂದ ಕಾರ್ಕಳ ಪುಲ್ಕೇರಿಯ ಸುನಿಲ್ ಕೆ.ಆರ್., ಸಾಮಾನ್ಯ ವಿಭಾಗದಿಂದ ಬೈಂದೂರಿನ ಪ್ರಣಯ್ ಶೆಟ್ಟಿ, ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ರಮಾಕಾಂತ ದೇವಾಡಿಗ ಹಾಗೂ ಕಡಿಯಾಳಿ ಕುಂಜಿಬೆಟ್ಟಿನ ಯು.ಮೋಹನ ಉಪಾಧ್ಯ ಅವರು ನೇಮಕಗೊಂಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.