ಉಡುಪಿ: ಭೂಮಾಹಿತಿ ವಿಜ್ಞಾನ ಕೇಂದ್ರಕ್ಕೆ ಮಾನ್ಯತೆ
ಉಡುಪಿ, ಸೆ.3: ಉಡುಪಿಯ ವಿಜ್ಞಾನ ಫೌಂಡೇಷನ್ ಸ್ಥಾಪಿಸಿರುವ ಭೂ ಮಾಹಿತಿ ವಿಜ್ಞಾನ ಸಂಶೋಧನ ಕೇಂದ್ರಕ್ಕೆ ಹೊಸದಿಲ್ಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯು (ಡಿಎಸ್‌ಐಆರ್) ವಿಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಎಂಡ್ ಡಿ) ಕೇಂದ್ರವೆಂದು ಮಾನ್ಯತೆ ನೀಡಿದೆ.
ಕಳೆದ ಎರಡು ವರ್ಷಗಳಿಂದ ಕೃಷಿ, ನೀರು, ಮಣ್ಣು, ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಉಪಗ್ರಹ ದೂರಸಂವೇಧಿ, ಭೂಮಾಹಿತಿ ವಿಜ್ಞಾನ ಹಾಗೂ ಜಿಪಿಎಸ್‌ಗಳ ತಂತ್ರಜ್ಞಾನ ಬಳಸಿ ಹಲವಾರು ಸಂಶೋಧನಾ ಯೋಜನೆಗಳನ್ನು ವಿಜ್ಞಾನ ಫೌಂಡೇಶನ್ ಕಾರ್ಯಗತಗೊಳಿಸಿದೆ. ಉಡುಪಿಯ ಕಾರ್ತಿಕ್ ಟ್ರೇಡ್ ಸೆಂಟರ್ ಹಾಗೂ ಸುರತ್ಕಲ್ ಎನ್‌ಐಟಿಕೆಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲ ಪಾರ್ಕ್‌ನಲ್ಲಿ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಹೊಸದಿಲ್ಲಿಯ ಐಸಿಎಂಆರ್/ಡಿಎಚ್‌ಆರ್ ಇಲಾಖೆಯು ಆರೋಗ್ಯ ಜಿಎಸ್‌ಐ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಕೇಂದ್ರಕ್ಕೆ ಅನುಮೋದನೆ ನೀಡಿದೆ. ಅಲ್ಲದೇ ಎಂಎಸ್‌ಎಂಇ ಇಲಾಖೆಯ ಜೊತೆ ಹಲವು ಕೈಗಾರಿಕಾ ಪ್ರೇರಿತ ಕಾರ್ಯಕ್ರಮಗಳನ್ನು ಸಹ ಅದು ಹಮ್ಮಿಕೊಂಡಿದೆ ಎಂದು ವಿಜ್ಞಾನ ಫೌಂಡೇಷನ್‌ನ ನಿರ್ದೇಶಕ ಡಾ.ಬಿ.ನವೀನಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು, ತರಬೇತಿ ಶಿಬಿರ ಹಾಗೂ ಭೂ ಮಾಹಿತಿ ವಿಜ್ಞಾನ ಶೈಕ್ಷಣಿಕ ಕೋರ್ಸ್, ಸೆಮಿನಾರ್, ಕಾರ್ಯಾಗಾರಗಳನ್ನು ನಡೆಸುವ ವಿಶಾಲ ಯೋಜನೆಗಳನ್ನು ವಿಜ್ಞಾನ ಫೌಂಡೇಷನ್ ಹೊಂದಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂ ಮಾಹಿತಿ ವಿಜ್ಞಾನದ ಉಪಯುಕ್ತ ಮೂಲಕ ಅನ್ವಯ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಭವಿಷ್ಯದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.