ಶ್ರೀಲಂಕಾ ಸಮುದ್ರದಲ್ಲಿ ಐಒಸಿಯ ಕಚ್ಚಾತೈಲ ಸಾಗಾಟದ ಬೃಹತ್ ಹಡಗಿಗೆ ಬೆಂಕಿ

Update: 2020-09-03 15:38 GMT

ಹೊಸದಿಲ್ಲಿ,ಸೆ.3: ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಒಸಿ)ದ ಕಚ್ಚಾತೈಲವನ್ನು ಸಾಗಿಸುತ್ತಿದ್ದ ಬೃಹತ್ ತೈಲವಾಹಕ ನೌಕೆಗೆ ಗುರುವಾರ ಬೆಳಿಗ್ಗೆ ಶ್ರೀಲಂಕಾದ ಪೂರ್ವ ಕರಾವಳಿಯಾಚೆ ಸುಮಾರು 29 ನಾಟಿಕಲ್ ಮೈಲುಗಳ ದೂರದಲ್ಲಿ ಬೆಂಕಿ ಹತ್ತಿಕೊಂಡಿದ್ದು,ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ಒಂದು ವಿಮಾನ ಮತ್ತು ಎರಡು ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರ ಕಮಾಂಡರ್ ರಂಜಿತ್ ರಾಜಪಕ್ಸ ಅವರು ತಿಳಿಸಿದ್ದಾರೆ. ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಚ್ಚಾತೈಲವನ್ನು ತುಂಬಿಕೊಂಡಿದ್ದ ನ್ಯೂ ಡೈಮಂಡ್ ಹೆಸರಿನ ಈ ತೈಲವಾಹಕ ನೌಕೆಯು ಕುವೈಟ್‌ನ ಮಿನಾ ಅಲ್ ಅಹ್ಮದಿಯಿಂದ ಭಾರತದ ಪಾರಾದೀಪ್‌ಗೆ ಪ್ರಯಾಣಿಸುತ್ತಿತ್ತು. ಪಾರಾದೀಪ್‌ನಲ್ಲಿ ಐಒಸಿ ದಿನಂಪ್ರತಿ ಮೂರು ಲಕ್ಷ ಬ್ಯಾರೆಲ್ ಸಾಮರ್ಥ್ಯದ ತೈಲ ಸಂಸ್ಕರಣಾಗಾರವನ್ನು ನಿರ್ವಹಿಸುತ್ತಿದೆ.

2.20 ಲ.ಟನ್ ತೈಲವನ್ನು ಸಾಗಿಸುತ್ತಿದ್ದ ಹಡಗಿನಿಂದ ಸಂಭಾವ್ಯ ತೈಲಸೋರಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾದ ಸಾಗರ ರಕ್ಷಣಾ ಪ್ರಾಧಿಕಾರವನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

                   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News