ಪಾಕ್, ಲಂಕಾ, ಮ್ಯಾನ್ಮಾರ್‌ನಲ್ಲಿ ಲಾಜಿಸ್ಟಿಕ್ಸ್ ನೆಲೆ ಸ್ಥಾಪಿಸಲು ಚೀನಾ ಸೇನೆ ಯೋಜನೆ

Update: 2020-09-03 15:49 GMT

 ವಾಶಿಂಗ್ಟನ್, ಸೆ. 3: ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯು ಮಾತೃನೆಲದಿಂದ ತುಂಬಾ ದೂರದಲ್ಲೂ ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಲು ಹಾಗೂ ತನ್ನ ಸೇನಾ ಶಕ್ತಿಯನ್ನು ಹೆಚ್ಚಿಸಲು 10ಕ್ಕೂ ಅಧಿಕ ದೇಶಗಳಲ್ಲಿ ಬಲಿಷ್ಠ ಲಾಜಿಸ್ಟಿಕ್ಸ್ ನೆಲೆಗಳನ್ನು ಸ್ಥಾಪಿಸಲಿದೆ. ಈ ಪೈಕಿ ಮೂರು ದೇಶಗಳು ಭಾರತದ ನೆರೆಯ ದೇಶಗಳಾಗಿವೆ. ಅವುಗಳೆಂದರೆ- ಪಾಕಿಸ್ತಾನ, ಶ್ರೀಲಂಕಾ ಮತ್ತು ಮ್ಯಾನ್ಮಾರ್.

ಚೀನಾದ ನೆಲೆಗಳನ್ನು ಹೊಂದಲಿರುವ ಇತರ ದೇಶಗಳೆಂದರೆ- ಥಾಯ್ಲೆಂಡ್, ಸಿಂಗಾಪುರ, ಇಂಡೋನೇಶ್ಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕೆನ್ಯ, ಸಿಶಲಿಸ್, ತಾಂಝಾನಿಯ, ಅಂಗೋಲ ಮತ್ತು ತಜಿಕಿಸ್ತಾನ.

ಚೀನಾವು ಈಗಾಗಲೇ ಡಿಜಿಬೋಟಿಯಲ್ಲಿ ಸೇನಾ ನೆಲೆಯನ್ನು ಹೊಂದಿದ್ದು, ಅದಕ್ಕೆ ಹೆಚ್ಚುವರಿಯಾಗಿ ಈ ದೇಶಗಳಲ್ಲಿ ಲಾಜಿಸ್ಟಿಕ್ಸ್ ನೆಲೆಗಳನ್ನು ಹೊಂದಲಿದೆ ಎಂದು ಪೆಂಟಗನ್ ತನ್ನ ವರದಿಯೊಂದರಲ್ಲಿ ತಿಳಿಸಿದೆ.

ಚೀನಾದಿಂದ ಹೋರ್ಮುಝ್ ಜಲಸಂಧಿ, ಆಫ್ರಿಕ ಮತ್ತು ಪೆಸಿಫಿಕ್ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಸಾಗರ ಸಂಪರ್ಕ ಮಾರ್ಗದುದ್ದಕ್ಕೂ ಲಾಜಿಸ್ಟಿಕ್ಸ್ ನೆಲೆಗಳನ್ನು ಹೊಂದುವ ಯೋಜನೆಯನ್ನು ಚೀನಾ ರೂಪಿಸಿದೆ ಹಾಗೂ ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಮೀಬಿಯ, ವನಾಟು ಮತ್ತು ಸೋಲೊಮನ್ ದ್ವೀಪಗಳನ್ನು ಸಂಪರ್ಕಿಸಲಾಗಿದೆ ಎಂದು ‘ಮಿಲಿಟರಿ ಆ್ಯಂಡ್ ಸೆಕ್ಯುರಿಟಿ ಡೆವೆಲಪ್‌ಮೆಂಟ್ಸ್ ಇನ್ವಾಲ್ವಿಂಗ್ ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) 2020’ ಎಂಬ ತನ್ನ ವಾರ್ಷಿಕ ವರದಿಯಲ್ಲಿ ಪೆಂಟಗನ್ ಹೇಳಿದೆ. ಈ ವರದಿಯನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News