ಆರ್‌ಬಿಐನಿಂದ ಸಾಲ ಪಡೆಯುವ ಸಲಹೆ ರಾಜ್ಯ ಸರಕಾರ ತಿರಸ್ಕರಿಸಲಿ: ಪ್ರಿಯಾಂಕ್ ಖರ್ಗೆ

Update: 2020-09-03 16:31 GMT

ಬೆಂಗಳೂರು, ಸೆ.3: ಜಿಎಸ್‍ಟಿಯಲ್ಲಿ ರಾಜ್ಯದ ಪಾಲು ಮತ್ತು ಪರಿಹಾರ ಪಾವತಿಸುವ ಬದಲಿಗೆ ಆರ್‌ಬಿಐನಿಂದ ಸಾಲ ಪಡೆಯುವಂತೆ ಕೇಂದ್ರ ಸರಕಾರ ನೀಡಿರುವ ಸಲಹೆಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಜಿಎಸ್‍ಟಿ ತೆರಿಗೆ ವಸೂಲಿಯಲ್ಲಿ ಉಂಟಾಗುವ ನಷ್ಟವನ್ನು 2020ರವರೆಗೆ ಕಟ್ಟಿಕೊಡುವ ಬದ್ಧತೆಯನ್ನು ಕೇಂದ್ರ 2017ರ ಜಿಎಸ್‍ಟಿ ಕಾಯ್ದೆಯಲ್ಲಿ ವ್ಯಕ್ತಪಡಿಸಿದೆ. ಅದರಂತೆ ನಡೆದುಕೊಳ್ಳಬೇಕಿದೆ. ವ್ಯಾಟ್ ಜಾರಿಯಲ್ಲಿದ್ದಾಗ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಯುಪಿಎ ಸರಕಾರ ರೂಪಿಸಿದ್ದ ಉತ್ತಮ ಜಿಎಸ್‍ಟಿ ಕಾಯ್ದೆಯನ್ನು ನರೇಂದ್ರ ಮೋದಿ ಅವರ ಸರಕಾರ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿ ಜಾರಿಗೆ ತಂದಿದೆ. ಇದರಿಂದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳದ ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರಕಾರ, ತಾನು ಮಾಡಿದ ತಪ್ಪಿಗೆ ದೇಶದ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಅಸಹನೀಯ ಎಂದು ಅವರು ಕಿಡಿಗಾರಿದ್ದಾರೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೋನದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭಾವನಾತ್ಮಕ ವಿಷಯಗಳನ್ನ ಕೇಂದ್ರಿಕರಿಸಿ ದ್ವೇಷ ರಾಜಕೀಯದಿಂದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದ ಬಿಜೆಪಿ, ತಾನು ಮಾಡಿದ ತಪ್ಪಿಗೆ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಹಿಟ್ಲರ್ ಧೋರಣೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಮುಲಾಜಿಗೆ ಒಳಗಾಗದೆ, ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರ ಸಲಹೆಯನ್ನು ಸರಾಸಗಟಾಗಿ ತಿರಸ್ಕರಿಸಬೇಕಿದೆ. ಕೇಂದ್ರ ಹಣಕಾಸು ಸಚಿವೆ ಸಲಹೆ ಒಪ್ಪಿಕೊಂಡು ಸಾಲ ಪಡೆದಿದ್ದೆ ಆದರೆ, ಅದರ ಬಡ್ಡಿ ಹೊರೆಯನ್ನು ರಾಜ್ಯದ ಜನರು ಹೊರಬೇಕಾಗುತ್ತದೆ. ನಮ್ಮ ತೆರಿಗೆಯನ್ನು ಕೊಟ್ಟು, ಅದರ ಹಿಡಗಂಟಿನ ಮೇಲೆ ಸಾಲ ಪಡೆದು, ಅದಕ್ಕೆ ಮತ್ತೆ ನಾವೇ ಬಡ್ಡಿ ಕಟ್ಟುವುದು ಎಂತಹ ಶಿಕ್ಷೆ ಎಂದು ಅವರು ಪ್ರಶ್ನಿಸಿದ್ದಾರೆ.

25 ಜನ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕಾಗಿ ಕನ್ನಡಿಗರಿಗೆ ಈ ಶಿಕ್ಷೆಯೇ? ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಸಾಲದ ಹೊರೆ ಹೊರಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅತಿವೃಷ್ಠಿ, ಅನಾವೃಷ್ಠಿಗಳಿಗೆ ಪರಿಹಾರ ಜೊತೆ ತೆರಿಗೆ ಪಾಲನ್ನೂ ನಿರಾಕರಿಸಿರುವ ಬಿಜೆಪಿಯ ಈ ನಡೆಯಿಂದಾಗಿ, ಕನ್ನಡಿಗರಿಗೆ ಮೋದಿ ಜಿಎಸ್‍ಟಿ ಜೊತೆಗೆ ಆರ್‌ಬಿಐ ಸಾಲ ಹಾಗೂ ಬಿಜೆಪಿ ಬಡ್ಡಿಯನ್ನೂ ಪಾವತಿಸುವ ಕರ್ಮ ಎದುರಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News