ಟಿಸಿಎಸ್ ಐಯಾನ್ - ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಶೈಕ್ಷಣಿಕ ಒಡಂಬಡಿಕೆ

Update: 2020-09-03 16:56 GMT

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಭಾರತದ ಖ್ಯಾತ ಐಟಿ ಕಂಪನಿ ಟಿಸಿಎಸ್ ಐಯಾನ್ ಜತೆಗೆ ಶೈಕ್ಷಣಿಕ ಒಪ್ಪಂದವನ್ನು ಮಾಡಿ ಕೊಂಡಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ನವಯುಗದ ಉದ್ಯಮ ಹೊಂದಾಣಿ ಕೆಯ ಕೌಶಲ್ಯ ಹಾಗೂ ಉದ್ಯಮ  ಪ್ರವೃತ್ತಿಯ ಇಂಟರ್ನಶಿಫ್ ಅವಕಾಶವನ್ನು ಟಿಸಿಎಸ್ ಐಯಾನ್‍ನ ಐಎಚ್‍ಸಿ (ಇಂಡಸ್ಟ್ರಿ ಆನರ್ ಸರ್ಟಿಫಿಕೇಶನ್) ಮತ್ತು ಆರ್‍ಐಒ (ರಿಮೋಟ್ ಇಂಟರ್ನ್‍ಶಿಪ್ ಅಪಾರ್ಚುನಿಟಿಸ್ ) ಮೂಲಕ ಒದಗಿಸಿ ಕೊಡುತ್ತದೆ. ಕರ್ನಾಟಕದ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಟಿಸಿಎಸ್ ಐಯಾನ್‍ನ ಒಡಂಬಡಿಕೆಗೆ ಒಳಪಡುತ್ತಿರುವ ಮೊದಲ ಕಾಲೇಜು ಎಂಬ ಹೆಮ್ಮೆಗೆ ಪಾತ್ರವಾಗುತ್ತಿದೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರು ಗುರುವಾರ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಟಿಸಿಎಸ್ ಐಯಾನ್, ಟಾಟಾಕನ್ಸಲ್ಟನ್ಸಿ ಸರ್ವೀಸಸ್‍ನ ಭಾಗವಾಗಿದೆ. ಐಯಾನ್‍ನ ಕೋರ್ಸುಗಳು ಆಳ್ವಾಸ್ ವಿದ್ಯಾರ್ಥಿ ಸಮೂಹಕ್ಕೆ ಔದ್ಯೋಗಿಕ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಾಗೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲ ಕ್ಷೇತ್ರಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೋಟಿಕ್ಸ್, ಕ್ಲೌಡ್‍ಕಂಪ್ಯುಟಿಂಗ್, ಡಾಟಾ ಮೈನಿಂಗ್, ಅನಾಲಿಟಿಕ್ಸ್, ಐಒಟಿ ಮತ್ತು ಸೈಬರ್ ಸೆಕ್ಯುರಿಟಿ ಮುಂತಾದ ಏರಿಯಾಗಳಲ್ಲಿ ಪರಿಣತಿ ಹೊಂದಲು ಸಹಾಯ ಮಾಡುತ್ತದೆ. ಟಿಸಿಎಸ್ ಐಯಾನ್, ಟಾಟಾಕನ್ಸಲ್ಟೆನ್ಸಿ ಸೇವೆಯತಂತ್ರಕುಶಲತೆಯ ವ್ಯವಹಾರಘಟಕವಾಗಿದ್ದು, ವಿವಿಧ ಸಂಸ್ಥೆಗಳ, ಸರಕಾರಿ ಇಲಾಖೆಗಳ, ವ್ಯವಹಾರೋದ್ಯಮದ ವಿಭಿನ್ನ ಕ್ಷೇತ್ರಗಳ ನೇಮಕಾತಿ ಪ್ರಕ್ರಿಯೆಗಳನ್ನು ಕೌಶಲ್ಯಗಳ ಮೂಲಕ ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಇದರ ಜೊತೆಗೆ ವ್ಯಾವಹಾರಿಕ ಕಾರ್ಯಸೂಚಿಗಳನ್ನು `ಫಿಜಿಟಲ್ ಪ್ಲಾಟ್‍ಫಾರ್ಮ್' ಮೂಲಕ ನಡೆಸುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಈ ವೇದಿಕೆಯು ಭೌತಿಕ ಕ್ರಿಯೆಗಳನ್ನು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಪರಿಣಾಮಕಾರಿಯಾಗಿ ನೇರವೇರಿಸುತ್ತಿದೆ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡೀಸ್, ಆಳ್ವಾಸ್ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಆಳ್ವಾಸ್ ಮತ್ತು ಟಿಸಿಎಸ್ ಐಯಾನ್ ಮಧ್ಯೆ ಒಪ್ಪಂದವಾಗಿರುವುದು ನಿಜಕ್ಕೂ ಸಂತಸದ ವಿಷಯ. ಈ ನೂತನ ಒಡಂಬಡಿಕೆಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಲು ಹಾಗೆಯೇ ಹೊಸ ಉದ್ಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳಲು ಅವಕಾಶ ನೀಡುತ್ತಿದೆ. ಆಳ್ವಾಸ್ ಯಾವತ್ತಿಗೂ ಔದ್ಯೋಗಿಕ ಕ್ಷೇತ್ರದ ಪ್ರಾಯೋಗಿಕತೆಗಳು ಹಾಗೂ ಶೈಕ್ಷಣಿಕ ಕ್ಷೇತ್ರದ ಅಂತರವನ್ನು ಕಡಿಮೆಗೊಳಿಸಲು ಹೆಚ್ಚಿನ ಆಸ್ಥೆ ತೋರಿಸುತ್ತ ಬಂದಿದೆ.

-ಡಾ. ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News