ಕಾರವಾರ: ಪಿಎಸ್ಸೈ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ವಂಚನೆ

Update: 2020-09-03 17:11 GMT

ಕಾರವಾರ, ಸೆ.3: ಪೊಲೀಸ್ ಅಧಿಕಾರಿಯ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಿದ ಪ್ರಕರಣ ಬಯಲಾಗಿದೆ.

ಕಾರವಾರ ನಗರದ ಗ್ರಾಮೀಣ ಠಾಣೆಯ ಪಿಎಸ್ಸೈ ರೇವಣ ಸಿದ್ದಪ್ಪ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅವರ ಫೇಸ್‌ಬುಕ್‌ನಿಂದ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಂಡು ನಕಲಿ ಖಾತೆಗೆ ಹಾಕಿ ರೇವಣ ಸಿದ್ದಪ್ಪ ಅವರ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ತುರ್ತಾಗಿ ಹಣ ಬೇಕು. ನನ್ನ ಖಾತೆ ಅಥವಾ ಯುಪಿಐ ಮೂಲಕ ಹಣ ಹಾಕುವಂತೆ ಹೇಳಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡುವಂತೆ ಕೇಳಿದ್ದಾರೆ. ನಕಲಿ ಫೇಸ್‌ಬುಕ್ ಖಾತೆಯಿಂದ ಪಿಎಸ್ಸೈ ಸ್ನೇಹಿತನ ಜೊತೆಗೆ ಚಾಟ್ ಮಾಡಿದಾಗ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾಗ ವಿಷಯ ತಿಳಿದು ಬಂದಿದೆ. ಅಷ್ಟರೊಳಗೆ ಸಾಕಷ್ಟು ಜನರು ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪಿಎಸ್ಸೈ ರೇವಣ ಸಿದ್ದಪ್ಪ ಮಾತನಾಡಿ, ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ತನ್ನ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೆಸೆಂಜರ್ ಮೂಲಕ ಚಾಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ನಕಲಿ ಖಾತೆ ತೆರೆದ ದುಷ್ಕರ್ಮಿಗಳ ಪತ್ತೆ ಹಚ್ಚಲಾಗುವುದು. ಈ ಬಗ್ಗೆ ಸೈಬರ್ ಕ್ರೈಮ್ ಅಡಿ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News