ದ.ಕ.ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ ಕೇವಲ 16 : ಜಿಲ್ಲಾಡಳಿತದ ಅಂಕಿ ಅಂಶ
ಮಂಗಳೂರು, ಸೆ. 4: ದ.ಕ. ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬ ಭಾವನೆ ಸಾರ್ವತ್ರಿಕವಾಗಿದ್ದರೂ ಕೂಡ ದ.ಕ. ಜಿಲ್ಲಾಡಳಿತ ಶುಕ್ರವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ಎಲ್ಲಾ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ.
ಮಾ.25ರಿಂದ ಸೆ.2ರವರೆಗೆ ದ.ಕ.ಜಿಲ್ಲೆಯಲ್ಲಿ ಕೊರೋನಕ್ಕೆ ಸಂಬಂಧಿಸಿ ಒಟ್ಟು 381 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಕೊರೋನ ಸೋಂಕು ಉಲ್ಬಣಿಸಿ ಮೃತಪಟ್ಟವರ ಸಂಖ್ಯೆ ಕೇವಲ 16 ಮಾತ್ರ. ಉಳಿದಂತೆ 365 ಮಂದಿಯ ಮರಣವು ಕೊರೋನ ಸಹಿತ ಇತರ ರೋಗದಿಂದ ಸಂಭವಿಸಿದೆ. ಅಂದರೆ ಅವರು ಆಸ್ಪತ್ರೆಗೆ ದಾಖಲಾಗಿ ಮೃತಪಡುವ ಮೊದಲು ಮತ್ತು ಬಳಿಕ ನಡೆಸಿದ ಗಂಟಲು ದ್ರವದ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ (ಕೊರೊನಾ ದೃಢ)ಕಂಡು ಬಂದಿದೆ. ಆದರೆ ಮೃತಪಟ್ಟ ಇಬ್ಬರಿಗೆ ಕೊರೋನವೇ ಇರಲಿಲ್ಲ ಎಂದು ಅಂಕಿ ಅಂಶ ತಿಳಿಸುತ್ತದೆ.
ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ 276 ಮಂದಿಯು ಕೊರೋನ ದೃಢಪಟ್ಟು ಬಳಿಕ ಮೃತಪಟ್ಟಿದ್ದರೆ, ವಿವಿಧ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ 84 ಮಂದಿಯು ಮೃತಪಟ್ಟ ಬಳಿಕ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಿವೆ. ಮೂವರು ಆಸ್ಪತ್ರೆಗೆ ಆಗಮಿಸುವಾಗಲೇ ಮೃತಪಟ್ಟಿದ್ದು, ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಅಂಕಿ ಅಂಶದಿಂದ ದೃಢಪಟ್ಟಿದೆ.
ಮಂಗಳೂರಿಗರೇ ಅಧಿಕ
ಕೊರೋನ ಅಥವಾ ಇತರ ಕಾಯಿಲೆಗಳಿಂದ ಕೊರೋನ ದೃಢಪಟ್ಟು ಮರಣ ಹೊಂದಿದವರ ಪೈಕಿ ಮಂಗಳೂರಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 218 ಮಂದಿ ಮಂಗಳೂರಿಗರು, 46 ಮಂದಿ ಬಂಟ್ವಾಳ, 11 ಮಂದಿ ಬೆಳ್ತಂಗಡಿ, 13 ಮಂದಿ ಪುತ್ತೂರು, 4 ಮಂದಿ ಸುಳ್ಯ ಹಾಗೂ 79 ಮಂದಿ ಹೊರ ಜಿಲ್ಲೆಯವರು ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ 277 ಮಂದಿ ಪುರುಷರು ಹಾಗೂ 104 ಮಂದಿ ಮಹಿಳೆಯರಿದ್ದಾರೆ.
ಮಂಗಳೂರಿನ 8,988, ಬಂಟ್ವಾಳದ 1,772, ಬೆಳ್ತಂಗಡಿಯ 856, ಪುತ್ತೂರಿನ 358, ಸುಳ್ಯದ 684, ಹೊರ ಜಿಲ್ಲೆಗಳ 821 ಸೇರಿ ಒಟ್ಟು 13,479 ಮಂದಿಗೆ ಈವರೆಗೆ ಕೊರೋನ ದೃಢಪಟ್ಟಿದೆ. ಕೊರೋನ ದೃಢಪಟ್ಟವರ ಪೈಕಿ ಕೇವಲ ಶೇ. 2.82 ಸಾವು ಸಂಭವಿಸಿದೆ. ಈ ಮೂಲಕ ಕೊರೋನ ಮಾರಣಾಂತಿಕವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಆದರೆ, ಮುನ್ನೆಚ್ಚರಿಕೆಗಳನ್ನು ಜನ ಮರೆಯಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
60-80 ವರ್ಷದವರೇ ಅಧಿಕ
ಕೊರೋನದಿಂದ ಮೃತಪಟ್ಟವರಲ್ಲಿ 60-80 ವರ್ಷ ಪ್ರಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 60-80 ವರ್ಷದ 188 ಮಂದಿ, 41-60 ವರ್ಷದ 132 ಮಂದಿ, 80 ವರ್ಷ ಮೇಲ್ಪಟ್ಟ 27 ಮಂದಿ, 21-40 ವರ್ಷದ 30 ಮಂದಿ ಹಾಗೂ 0-20 ವರ್ಷದೊಳಗಿನ ನಾಲ್ವರು ಮೃತಪಟ್ಟಿದ್ದಾರೆ. ಇದರಲ್ಲಿ 364 ಮಂದಿ ಬಹು ವಿಧದ ಕಾಯಿಲೆ ಹಾಗೂ 17 ಮಂದಿ ಒಂದೇ ಮಾದರಿಯ ಕಾಯಿಲೆ ಹೊಂದಿದವರಾಗಿದ್ದಾರೆ ಎಂದು ಅಂಕಿ ಅಂಶ ತಿಳಿಸುತ್ತದೆ.