ಎಮ್ ಎನ್ ಜಿ ಫೌಂಡೇಶನ್ ನೇತೃತ್ವದಲ್ಲಿ ಬಾಲಕಿಯ ಚಿಕಿತ್ಸೆಗೆ ಧನಸಹಾಯ
ಮಂಗಳೂರು: ಪುತ್ತೂರು ತಾಲೂಕಿನ ಗಿಡೆಗಲ್ಲ್ ಎಂಬಲ್ಲಿನ ಬಡ ದಂಪತಿಯ ಆರು ವರ್ಷದ ಹೆಣ್ಣು ಮಗು ಸನ್ನಿಧಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ಆ ಕೂಡಲೇ ಮಗುವನ್ನು ಸ್ಥಳೀಯ ಪುತ್ತೂರು ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿ ಹಲವು ಪರೀಕ್ಷೆಗಳ ಬಳಿಕ ಸೊಂಟದಿಂದ ಕೆಳಗೆ ಸಂಪೂರ್ಣ ಬಲ ಕಳೆದುಕೊಂಡಿದ್ದ ಮಗುವಿಗೆ ಪೋಲಿಯೊ ಬಾಧಿಸಿರುವ ಬಗ್ಗೆ ಧೃಢಪಟ್ಟಿತ್ತು. ನಂತರ ಎಂದಿನಂತೆ ಮಗುವನ್ನು ವಾಪಾಸು ಪಡೆಯಲು ವಿಶೇಷ ಚಿಕಿತ್ಸೆಗಾಗಿ ಸುಮಾರು 3 ಲಕ್ಷ ತಗುಲುವ ಬಗ್ಗೆ ವೈದ್ಯರು ಸೂಚಿಸಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಕೂಡಿಸಲು ಸಾಧ್ಯವಾಗದೆ ಮಗುವಿನ ಕುಟುಂಬ ದಿಕ್ಕು ತೋಚದಂತ್ತಾಗಿತ್ತು.
ಈ ಬಗ್ಗೆ ಮಗುವಿನ ಕುಟುಂಬದ ಸದಸ್ಯರೊಬ್ಬರು ಮಂಗಳೂರಿನ ಎಮ್ ಎನ್ ಜಿ ಫೌಂಡೇಶನ್ ಅನ್ನು ಸಂಪರ್ಕಿಸಿ ತಮ್ಮ ಕಷ್ಟದ ಬಗ್ಗೆ ವಿವರಿಸಿದಾಗ ಆ ಕೂಡಲೇ ಸಂಸ್ಥೆಯ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದು ಕುಟುಂಬದ ಅಸಹಾಯಕ ಪರಿಸ್ಥಿತಿಯ ಬಗ್ಗೆ ಅರಿವಿಗೆ ಬಂದಿತ್ತು. ನಂತರ ಆ.27ರಂದು ಪೋಲಿಯೋಗೆ ತುತ್ತಾಗಿರುವ ಸನ್ನಿಧಿಯ ಚಿಕಿತ್ಸೆಗೆ ನೆರವಾಗುವಿರಾ ಎಂಬ ತಲೆಬರಹದಡಿ ದಾನಿಗಳ ಸಹಾಯದ ನಿರೀಕ್ಷೆಯನ್ನಿಟ್ಟು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯು ಒಂದು ವೀಡಿಯೋ ಮತ್ತು ಲೇಖನವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಟ್ಟಿತ್ತು.
ಸೆ. 3ರಂದು ಸಂಜೆಯ ಸುಮಾರಿಗೆ ಮಾನವೀಯತೆಗೆ ಮೌಲ್ಯ ಕಲ್ಪಿಸಿದ ದಾನಿಗಳು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆ ಜೊತೆ ಕೈಜೋಡಿಸಿ ದರ ಪರಿಣಾಮ ಮಗುವಿನ ಮುಂದಿನ ಚಿಕಿತ್ಸೆಗಾಗಿ ಬೇಕಾಗಿದ್ದ ಸುಮಾರು ಮೂರುವರೆ ಲಕ್ಷಕ್ಕೂ ಮಿಕ್ಕಿದ ಮೊತ್ತವು ಮಗುವಿನ ತಾಯಿಯ ಖಾತೆಗೆ ಜಮೆಯಾಗಿರುತ್ತದೆ.
ಈ ಪ್ರಕ್ರಿಯೆಯಲ್ಲಿ ಎಮ್ ಎನ್ ಜಿ ಫೌಂಡೇಶನ್ ಜೊತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಹಲವು ಸಮಾಜಸೇವಕರುಗಳು ಸಾಮಾಜಿಕ ಜಾಲತಾಣದ ಮೂಲಕ ದಾನಿಗಳನ್ನು ತಲುಪುವಲ್ಲಿ ನಮ್ಮ ಜೊತೆ ಕೈಜೋಡಿಸಿದ್ದರು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಗುವಿನ ತಾಯಿಯ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮುಂದೆ ಆ ಖಾತೆಗೆ ಹಣ ವರ್ಗಾವಣೆ ಮಾಡದಂತೆ ಮತ್ತು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಮಗುವಿನ ಕುಟುಂಬಕ್ಕೆ ಮುಂದೆ ಸಹಾಯ ಮಾಡಲು ಇಚ್ಛಿಸಿದ ದಾನಿಗಳು ನೇರವಾಗಿ ಆಸ್ಪತ್ರೆಯಲ್ಲಿ ಕುಟುಂಬವನ್ನು ಭೇಟಿಯಾಗಿ ಸಹಾಯ ಮಾಡುವಂತೆ ಸಂಸ್ಥೆ ಕೋರಿ ಕೊಂಡಿದೆ.