ದ.ಕ. ಧ್ವನಿವರ್ಧಕ, ದೀಪಾಲಂಕಾರ ಮಾಲಕರ ಸಂಘದಿಂದ ಪ್ರತಿಭಟನೆ
ಮಂಗಳೂರು, ಸೆ.4: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಹಿರೇಮಠ, ಕೊರೋನಾ ಲಾಕ್‌ಡೌನ್‌ನಿಂದ ಕಾರ್ಯಕ್ರಮಗಳು ಸ್ಥಗಿತಗೊಂಡು ಧ್ವನಿವರ್ಧಕ ಮತ್ತು ದೀಪಾಲಂಕಾರ ಉದ್ಯಮ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಉದ್ಯಮದ ಮಾಲಕರು ಮತ್ತು ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಸರಕಾರ ನಮಗೆ ಯಾವುದೇ ನೆರವು ನೀಡಿಲ್ಲ ಎಂದರು.
ಸಾಲ ಮರುಪಾವತಿ, ಕಟ್ಟಡ ಬಾಡಿಗೆ ಪಾವತಿ ಸಹಿತ ನಿತ್ಯಜೀವನ ಕಷ್ಟಕರವಾಗಿ ಪರಿಣಮಿಸಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ನೀಡಿದರೂ ಇದುವರೆಗೆ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂಘದ ದ.ಕ. ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು ಮಾತನಾಡಿ, ಧ್ವನಿವರ್ಧಕ ಮತ್ತು ದೀಪಾಲಂಕಾರ ವ್ಯವಹಾರವನ್ನು ರಾಜ್ಯ ಸರಕಾರ ಸಣ್ಣ ಕೈಗಾರಿಕೆ ಎಂದು ಪರಿಗಣಿಸಿ ಸರಕಾರದಿಂದ ಸಿಗುವ ಸೌಲಭ್ಯ ನೀಡಬೇಕು, ಸಾಮಾಜಿಕ, ಧಾರ್ಮಿಕ, ಇನ್ನಿತರ ಶುಭ ಸಮಾರಂಭಗಳಿಗೆ 100 ಮಂದಿಯ ಬದಲಿಗೆ ಕನಿಷ್ಠ 250 ಮಂದಿಗೆ ಭಾಗವಹಿಸಲು ಅನುಮತಿ ನೀಡಬೇಕು, ನಮ್ಮ ವ್ಯವಹಾರದ ಪರಿಸ್ಥಿತಿ ಯನ್ನು ಸರಕಾರ ಅವಲೋಕಿಸಿ ನಮ್ಮ ಸಂಘದ ಸದಸ್ಯರಿಗೆ ಅಗತ್ಯ ದಾಖಲೆಗಳೊಂದಿಗೆ ಸಬ್ಸಿಡಿ ಹೊಂದಿರುವ ಸಾಲಸೌಲಭ್ಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ದ.ಕ. ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಧ್ವನಿವರ್ಧಕ ಮತ್ತು ದೀಪಾಲಂಕಾರ ವ್ಯವಹಾರ ನಡೆಸುವ ಮಾಲಕರು ಹಾಗೂ 3500ಕ್ಕೂ ಹೆಚ್ಚು ಸದಸ್ಯ ಸಂಸ್ಥೆಗಳ ಕಾರ್ಮಿಕರು ಇದ್ದಾರೆ. ಕೊರೋನಾದಿಂದ ಮಾ.24ರಿಂದ ಇವರೆಲ್ಲರಿಗೂ ಉದ್ಯೋಗ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ ಎಂದವರು ಹೇಳಿದರು.
ರಾಜ್ಯ ಸಮಿತಿ ಕಾರ್ಯದರ್ಶಿ ವಿಶಾಲ್ ಜಿ. ವಾಘಮೋಡೆ, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ನಾರಾಯಣ ಗೌಡ, ಬಂಟ್ವಾಳದ ಶೇಖ್ ಸುಭಾನ್, ಸುಳ್ಯದ ಗಿರಿಧರ ಸ್ಕಂದ, ಪುತ್ತೂರಿನ ಸುರೇಶ್ ರೈ ಸೂಡಿಮುಳ್ಳು, ಉಡುಪಿ ಜಿಲ್ಲಾ ಕಾರ್ಯದರ್ಶಿ ದಾಮೋದರ ಶೆಟ್ಟಿಗಾರ್, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಇಸ್ಮಾಯಿಲ್ ವಿಟ್ಲ, ಸಂಜೀವ ಕೋಟ್ಯಾನ್ ಭಾಗವಹಿಸಿದ್ದರು. ಬಳಿಕ ಜಿಲ್ಲಾಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.