'ಸಿಂಗಂ' ಚಿತ್ರದಿಂದ ಪ್ರಭಾವಿತರಾಗುವುದು ಬೇಡ: ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

Update: 2020-09-05 06:07 GMT

ಹೈದರಾಬಾದ್ : ಪೊಲೀಸ್ ಅಧಿಕಾರಿಗಳನ್ನು ಸೂಪರ್‌ಕಾಪ್‌ಗಳಾಗಿ ಬಿಂಬಿಸಿದ ಸಿಂಗಂನಂಥ ಚಿತ್ರಗಳಿಂದ ಪೊಲೀಸರು ಪ್ರಭಾವಿತರಾಗುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ. ಕೆಲ ಪೊಲೀಸರು ಶೋ ಆಫ್ ಮಾಡಲು ಬಯಸಿ, ಪೊಲೀಸರ ಮುಖ್ಯ ಕರ್ತವ್ಯವನ್ನೇ ಮರೆಯುತ್ತಾರೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 2018ನೇ ಬ್ಯಾಚ್ ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಮೋದಿ, ಯಾವುದೇ ತಪ್ಪುಗಳಲ್ಲಿ ಷಾಮೀಲಾಗಬೇಡಿ ಎಂದು ಎಚ್ಚರಿಸಿದರು. ಹಾಗೆ ಮಾಡಿದಲ್ಲಿ ಇತ್ತೀಚಿನ ತಂತ್ರಜ್ಞಾನಗಳಿಂದಾಗಿ ತೊಂದರೆಗೆ ಸಿಲುಕಿಕೊಳ್ಳುವುದು ಖಚಿತ ಎಂದು ಹೇಳಿದರು. ಈ ತಂತ್ರಜ್ಞಾನಗಳು ಉತ್ತಮ ಪೊಲೀಸಿಂಗ್‌ಗೆ ಕೂಡಾ ಉಪಯುಕ್ತ ಎಂದು ಅವರು ವಿಶ್ಲೇಷಿಸಿದರು.

"ಹೊಸದಾಗಿ ಕರ್ತವ್ಯಕ್ಕೆ ನಿಯೋಜಿತರಾದ ಕೆಲ ಅಧಿಕಾರಿಗಳು ಸಿಂಗಂನಂಥ ಚಿತ್ರ ನೋಡಿದ ಬಳಿಕ ಮೊದಲು ಶೋ ಆಫ್ ಮಾಡಲು ಬಯಸುತ್ತಾರೆ.. ಭೀತ ಜನರು, ಸಮಾಜಘಾತುಕ ಶಕ್ತಿಗಳು ನನ್ನ ಹೆಸರು ಕೇಳಿದ ತಕ್ಷಣ ನಡುಗಬೇಕು ಎಂದು ಇಚ್ಛಿಸುತ್ತಾರೆ..ಇದು ತಲೆಗೆ ಬಂದರೆ ಅವರು ಮಾಡಬೇಕಾದ ಕೆಲಸ ತಪ್ಪಿಹೋಗುತ್ತದೆ" ಎಂದು ವಿವರಿಸಿದರು.

ಮಹಿಳಾ ಪ್ರೊಬೆಷನರಿ ಅಧಿಕಾರಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಮೋದಿ, ಕಾಶ್ಮೀರ ಜನತೆಯನ್ನು ಶ್ಲಾಘಿಸಿದರು. "ಅವರು ಒಳ್ಳೆಯವರು; ಹೊಸದನ್ನು ಕಲಿಯುವ ವಿಶೇಷ ಸಾಮರ್ಥ್ಯ ಹೊಂದಿದ್ದಾರೆ" ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News