ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿಯಕರನ ಬಂಧನ
ಬ್ರಹ್ಮಾವರ, ಸೆ.4: ಸಾಬರಕಟ್ಟೆ ಕಾಜರಹಳ್ಳಿಯ ಎಂಬಿಎ ವಿದ್ಯಾರ್ಥಿನಿ ಅನಿಷಾ(26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ಚೇತನ್ ಶೆಟ್ಟಿ(30) ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಾಜರಹಳ್ಳಿಯ ನಿವಾಸಿಗಳಾದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಚೇತನ್ ಶೆಟ್ಟಿ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಮರಣ ಪತ್ರ ಬರೆದಿಟ್ಟ ಅನಿಷಾ, ಆರೋಪಿಯ ಮನೆಯ ಜಾಗದಲ್ಲಿಯೇ ಆ.21ರಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಳು. ಮೃತರ ಮನೆಯವರು ಚೇತನ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ನೀಡಿರುವ ಬಗ್ಗೆ ದೂರು ನೀಡಿದ್ದರು.
ಅನಿಷಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಚೇತನ್ ತಲೆಮರೆಸಿದ್ದ ಎನ್ನಲಾಗಿದ್ದು, ಈತನ ಪತ್ತೆಗಾಗಿ ಬಿಲ್ಲವ ಸಂಘಟನೆಗಳು ಒತ್ತಾಯ ಮಾಡಿದ್ದವು. ಈ ಹಿನ್ನೆಲೆ ಯಲ್ಲಿ ಪೊಲೀಸ್ ತಂಡ ರಚಿಸಿ, ಆರೋಪಿಗಾಗಿ ಹುಡುಕಾಟ ನಡೆಸಲಾಗಿತ್ತು. ಸೆ.2ರಂದು ಚೇತನ್ ಶೆಟ್ಟಿಯನ್ನು ಬೆಂಗಳೂರಿನ ಚಂದ್ರ ಲೇಔಟ್ ಎಂಬಲ್ಲಿ ವಶಕ್ಕೆ ಪಡೆದ ಪೊಲೀಸರು, ಸೆ.4ರಂದು ಬ್ರಹ್ಮಾವರಕ್ಕೆ ಕರೆತಂದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸೆ.16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.