×
Ad

ಬಾಂಗ್ಲಾದೇಶದ ಮಸೀದಿಯಲ್ಲಿ 8 ಎಸಿಗಳು ಸ್ಫೋಟ, 12 ಮಂದಿ ಮೃತ್ಯು

Update: 2020-09-05 14:40 IST

ಢಾಕಾ, ಸೆ.5: ಬಾಂಗ್ಲಾದೇಶದ ರಾಜಧಾನಿ ಹೊರವಲಯ ನಾರಾಯಣ ಗಂಜ್ ಜಿಲ್ಲೆಯ ಮಸೀದಿಯೊಂದರಲ್ಲಿ ಶುಕ್ರವಾರ ರಾತ್ರಿ 9 ಗಂಟೆಗೆ ಹವಾನಿಯಂತ್ರಕಗಳು ಸ್ಫೋಟಗೊಂಡ ಪರಿಣಾಮ ಓರ್ವ ಬಾಲಕ ಸೇರಿ ಒಟ್ಟು 12 ಜನರು ಮೃತಪಟ್ಟಿದ್ದಾರೆ.

 ಆಸ್ಪತ್ರೆಗೆ ದಾಖಲಾಗಿರುವ ಹಾಗೂ ದೇಹದ ಬಹು ಭಾಗ ಸುಟ್ಟುಹೋಗಿರುವವರ ಪೈಕಿ 12 ಮಂದಿ ಶನಿವಾರ ಬೆಳಗ್ಗೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಢಾಕಾದಲ್ಲಿರುವ ಶೇಖ್ ಹಸೀನಾ ಬರ್ನ್ ಆ್ಯಂಡ್ ಪ್ಲಾಸ್ಟಿಕ್ ಸರ್ಜರಿ ನ್ಯಾಶನಲ್ ಇನ್‌ಸ್ಟಿಟ್ಯೂಟ್‌ನ ಸಂಯೋಜಕ ಸಮಂತಾ ಪಾಲ್ ಸೇನ್ ತಿಳಿಸಿದ್ದಾರೆ.

ಗಾಯಗೊಂಡಿದ್ದ ಕನಿಷ್ಠ 37 ಜನರನ್ನು ಸಂಸ್ಥೆಗೆ ದಾಖಲಿಸಲಾಗಿದೆ. ಬಹುತೇಕ ಸಂತ್ರಸ್ತರ ದೇಹ ಶೇ.60-70ರಷ್ಟು ಸುಟ್ಟುಹೋಗಿದೆ. ಇತರ ಸುಮಾರು 25 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸೇನ್ ತಿಳಿಸಿದ್ದಾರೆ.

ಭಾರೀ ಸ್ಫೋಟದಿಂದಾಗಿ ಮಸೀದಿಯ ಕಿಟಿಕಿಗಾಜುಗಳು ಪುಡಿಪುಡಿಯಾಗಿವೆ. ಸೀಲಿಂಗ್ ಫ್ಯಾನ್‌ಗಳು, ವಿದ್ಯುತ್ ವೈರ್‌ಗಳು ಹಾಗೂ ಸ್ವಿಚ್‌ಬೋರ್ಡ್‌ಗಳು ಸುಟ್ಟುಹೋಗಿವೆ ಎಂದು ನಾರಾಯಣಗಂಜ್ ಫತುಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಟೈಟಾಸ್ ಗ್ಯಾಸ್‌ನ ಪೈಪ್‌ಲೈನ್ ಮಸೀದಿಯ ಕೆಳಗೆ ಹಾದಿ ಹೋಗಿದೆ. ಕಿಟಕಿಗಳು ಬಂದ್ ಆಗಿದ್ದರಿಂದ ಪೈಪ್‌ಲೈನ್‌ನಿಂದ ಸೋರಿಕೆಯಾಗಿದ್ದ ಅನಿಲ ಮಸೀದಿ ಒಳಗೆ ಸಂಗ್ರಹವಾಗಿರಬಹುದು ಎಂದು ಶಂಕೆ ಇದೆ. ಎಸಿ ಹಾಗೂ ಫ್ಯಾನ್‌ಗಳ ಆನ್ ಹಾಗೂ ಆಫ್ ವೇಳೆ ಕಿಡಿ ಹಾರಿ ಬೆಂಕಿ ಹೊತ್ತಿರಬಹುದು'' ಎಂದು ನಾರಾಯಣಗಂಜ್ ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News