​ಸತ್‌ಪ್ರಜೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅನನ್ಯ: ಚಂದ್ರಶೇಖರ ಸ್ವಾಮೀಜಿ

Update: 2020-09-05 09:52 GMT

ಮುಲ್ಕಿ: ಶಿಕ್ಷಕ ವೃತ್ತಿ ಎಂಬುದು ಪವಿತ್ರ ವೃತ್ತಿಯಾಗಿದೆ. ಸುಶಿಕ್ಷಿತ ಸಮಾಜ ನಿರ್ಮಾಣ ಮತ್ತು ಸತ್ ಚಿಂತನೆಯ ಸಮಾಜ ಅವರ ಪರಿಶ್ರಮದ ಸಂಕೇತವಾಗಿದೆ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮುಲ್ಕಿಯ ಕಿಲ್ಪಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮ ಮತ್ತು ಜ್ಯೋತಿಷ್ಯ ರತ್ನ ಕಿಲ್ಪಾಡಿ ಶ್ರೀ ಗೋವಿಂದ ಭಟ್ ಪ್ರತಿಷ್ಠಾನದ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮುಲ್ಕಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಹಿರಿಯ ಶಿಕ್ಷಕ ಲಕ್ಷ್ಮಣ ಶೆಟ್ಟಿಗಾರ್ ಅವರನ್ನು ಸನ್ಮಾನ ಕಾರ‍್ಯಕ್ರಮದ ಬಳಿಕ ಅನ್‌ಲೈನ್‌ನಲ್ಲಿ ಅವರು ಮಾತನಾಡಿದರು.

ಇಡೀ ಸಮಾಜವನ್ನು ಪರಿವರ್ತನೆ ಮಾಡುವ ಸಾಮರ್ಥ್ಯವು ಗುರುವಿಗೆ ಇದೆ. ಆದುದರಿಂದ ಗುರು ಸ್ಥಾನಕ್ಕೆ ನಮ್ಮ ಹಿರಿಯರು ಅತ್ಯಂತ ಗೌರವ ನೀಡಿದ್ದಾರೆ. ಗುರುವು ಕೇವಲ ಪಾಠ ಮಾಡುವ ಬದಲು ಮಗುವಿನ ಭವಿಷ್ಯ ರೂಪಿಸುವ ಪಾಠ ಮಾಡಬೇಕಿದೆ. ಸಾಮಾನ್ಯ ಮಗುವನ್ನು ಉತ್ತಮ ಮಗುವಾಗಿ ಪರಿವರ್ತಿಸುವ ಶಿಲ್ಪಿಯಾಗಬೇಕಿದೆ ಎಂದರು.

ಶಿಕ್ಷಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಪ್ರತಿಷ್ಠಾನದ ಕಾರ‍್ಯದರ್ಶಿ ಹಾಗೂ ಆಶ್ರಮದ ಗೌರವಾಧ್ಯಕ್ಷ ವಿಶ್ವನಾಥ್ ಭಟ್, ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನದಂದು ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಎಳವೆಯಲ್ಲಿ ಮಕ್ಕಳನ್ನು ತಿದ್ದಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸು ವುದರಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದರು.

ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಜೀವನದ ಮೌಲ್ಯಗಳನ್ನು ಅಳವಡಿಸಿ ಸಮಾಜ ದಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಶ್ರಮ ಅನನ್ಯ. ಪ್ರತಿಷ್ಠಾನವು ಪ್ರತಿ ವರ್ಷ ಹಿರಿಯ ಶಿಕ್ಷಕರನ್ನು ನೆನಪಿಸಿ ಗೌರವಿಸುವ ಕೆಲಸ ಶ್ಲಾಘನೀಯ ಎಂದರು.

ಉಷಾಶ್ರೀ ವಿಶ್ವನಾಥ ಭಟ್, ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಉಪಾಧ್ಯಕ್ಷರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ವಲಯ ಸಲಹೆಗಾರರಾದ ಉದಯ ಅಮಿನ್ ಮಟ್ಟು, ಲಿಯೋ ಅಧ್ಯಕ್ಷೆ ಶಿವಾನಿ ಹೆಬ್ಬಾರ್, ಸಾಧನಾ ಹೆಬ್ಬಾರ್, ಆಯಾಂಶ್, ಲೆಕ್ಕಪರಿಶೋಧಕ ಜಯರಾಮ ಶೆಟ್ಟಿ ಮಂಗಳೂರು, ಕಲ್ಲಾಪು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾದ ಕೃಷ್ಣ ಶೆಟ್ಟಿಗಾರ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News