ಶಿಕ್ಷಣದ ಬಗ್ಗೆ ಸ್ಪಷ್ಟ ನೀತಿ ಪ್ರಕಟಿಸಲು ಶಾಸಕ ಯು.ಟಿ. ಖಾದರ್ ಆಗ್ರಹ
ಮಂಗಳೂರು, ಸೆ.5: ಕೋವಿಡ್ ಕಾರಣದಿಂದ ಸೂಕ್ತ ವೇತನವಿಲ್ಲದೆ ಬೀದಿಪಾಲಾದ ಶಿಕ್ಷಕರ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸುತ್ತಿಲ್ಲ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಯಾವುದೇ ಖಚಿತತೆ ಸರ್ಕಾರದಲ್ಲಿ ಇಲ್ಲ. ಹಾಗಾಗಿ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ತಾವು ಬಹಿಷ್ಕರಿಸುತ್ತಿರುವುದಾಗಿ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದ್ದರಿಂದ ಶಿಕ್ಷಣದ ಬಗ್ಗೆ ಸ್ಪಷ್ಟವಾದ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
ಕೊರೋನ ಕಾಣಿಸಿದ ಬಳಿಕ ಕಳೆದ ಆರು ತಿಂಗಳಿಂದ ಶಿಕ್ಷಕರನ್ನು ಸರ್ಕಾರ ಕಡೆಗಣಿಸಿದೆ. ಶಿಕ್ಷಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಶಿಕ್ಷಕರು ಶಿಕ್ಷಕ ವೃತ್ತಿ ಬಿಟ್ಟು ತರಕಾರಿ ಅಂಗಡಿ ಮುಂತಾದ ಪರ್ಯಾಯ ವೃತ್ತಿ ನಡೆಸುವಂತಾಗಿದೆ. ಇತರೆ ವ್ಯಾಪಾರ ಮಾಡುವ ಮೂಲಕ ಶಿಕ್ಷಕರ ಘನತೆಗೆ ಸರ್ಕಾರವೇ ಬೇಸರ ಉಂಟುಮಾಡಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕ ವರ್ಗಕ್ಕೆ ನೆರವಾಗುವ ಬದಲು ಶಿಕ್ಷಣ ಸಚಿವರು ಶಾಲಾರಂಭದ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರ ಹೇಳಿಕೆಯಿಂದಾಗಿ ಶಾಲೆಗಳಲ್ಲಿ ಶುಲ್ಕ ಸಂಗ್ರಹ ಆರಂಭವಾಗಿದೆ. ಆನ್‌ಲೈನ್ ತರಗತಿ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದು, ಯಾವ ತರಗತಿಗೆ ಯಾವ ಪಠ್ಯ ಎಂಬ ನಿಖರತೆಯೂ ಶಾಲೆಗಳಲ್ಲಿ ಇಲ್ಲ. ಒಂದೊಂದು ತರಗತಿಗೆ ಒಂದೊಂದು ಪಠ್ಯವನ್ನು ಬೋಧಿಸುತ್ತಿದ್ದಾರೆ. ಬೀದಿ ಪಾಲಾಗಿರುವ ಶಿಕ್ಷಕರ ಬಗ್ಗೆ ಸಚಿವರು ಮೌನವಾಗಿದ್ದಾರೆ ಎಂದು ಖಾದರ್ ಟೀಕಿಸಿದರು.
ಶಿಕ್ಷಕರ ಪರವಾಗಿ ಸರ್ಕಾರ ನಿಂತಿಲ್ಲ, ಶಿಕ್ಷಕರಿಗೆ ಆರ್ಥಿಕ ನೆರವನ್ನೂ ನೀಡಿಲ್ಲ. ಖಾಸಗಿ ಶಾಲೆಗಳಿಗೆ ಆರ್ಥಿಕ ಪುನಶ್ಚೇತನಕ್ಕೆ ಬಡ್ಡಿರಹಿತ ಸಾಲದ ನೆರವಿನ ವ್ಯವಸ್ಥೆಯನ್ನೂ ಶಿಕ್ಷಣ ಇಲಾಖೆ ಮಾಡಿಲ್ಲ. ಹೀಗಾದಲ್ಲಿ ವಿದ್ಯಾರ್ಥಿಗಳಿಂದ ಒತ್ತಡ ಹಾಕಿ ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ತಪ್ಪಿಸ ಬಹುದು. ಬಹುತೇಕ ವಿದ್ಯಾರ್ಥಿಗಳು ಶಾಲೆಯನ್ನು ಬಿಡುವ ಸಿದ್ಧತೆಯಲ್ಲಿ ಇದ್ದಾರೆ. ಹೀಗಿರುವಾಗ ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಹೇಳುವುದರಲ್ಲಿ ಏನು ಅರ್ಥವಿದೆ ಎಂದು ಅವರು ಪ್ರಶ್ನಿಸಿದರು.
ಅಕ್ಟೋಬರ್‌ನಿಂದ ತರಗತಿ ಆರಂಭಿಸಿ ಮೇ ತಿಂಗಳಿಗೆ ಮುಕ್ತಾಯ ಮಾಡುವಂತೆ ಪಠ್ಯ ಕಡಿತ ಮಾಡಬೇಕು. ಬಿಸಿಯೂಟದ ಅವಸ್ಥೆ ಏನು ಎಂಬುದನ್ನು ಸರ್ಕಾರ ನಿರ್ಧರಿಸಬೇಕು. ಶಾಲೆಯನ್ನು ಬಿಟ್ಟ ಮಕ್ಕಳ ಸಮೀಕ್ಷೆ ನಡೆಸಬೇಕು. ಶಾಲೆಗಳಿಗೆ ಆರ್ಥಿಕ ಪ್ಯಾಕೆಜ್ ನೀಡಬೇಕು. ಶಿಕ್ಷಣದ ಹೊರೆಯನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿ ಸ್ನೇಹಿ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಿಸಬೇಕು. ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು ಎಂದು ಖಾದರ್ ಒತ್ತಾಯಿಸಿದರು.
ಮಾಜಿ ಶಾಸಕ ಐವನ್ ಡಿಸೋಜಾ, ಮುಖಂಡರಾದ ಸದಾಶಿವ ಉಳ್ಳಾಲ್, ಎ.ಸಿ.ವಿನಯರಾಜ್, ಅಪ್ಪಿ, ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.
ಐಟಿ ಕಚೇರಿ ವಿಲೀನ ಬಗ್ಗೆ ಜನಪ್ರತಿನಿಧಿಗಳು ಮೌನವೇಕೆ?
ಮಂಗಳೂರಿನಲ್ಲಿ ಆಡಳಿತ ಕಚೇರಿ ಹೊಂದಿರುವ ಆದಾಯ ತೆರಿಗೆ ಇಲಾಖೆ ಕಚೇರಿಯನ್ನು ಗೋವಾದ ಪಂಜಿಮ್ ಕಚೇರಿ ಜೊತೆ ವಿಲೀನ ಗೊಳಿಸಲು ಸಿದ್ಧತೆ ನಡೆಯುತ್ತಿದೆ. ಈ ವಿಚಾರ ಗೊತ್ತಿದ್ದೂ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿರುವುದಕ್ಕೆ ಕಾರಣ ಏನು ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
ಮಂಗಳೂರು ಐಟಿ ಕಚೇರಿಗೆ ದ.ಕ, ಉಡುಪಿ, ಕಾರವಾರ ಜಿಲ್ಲೆಗಳ ವ್ಯಾಪ್ತಿ ಇದೆ. ಅನೇಕ ಉದ್ದಿಮೆಗಳು ಕೂಡ ಇಲ್ಲಿ ಇವೆ. ಬೆಂಗಳೂರು ಹೊರತು ಪಡಿಸಿದರೆ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವ ಜಿಲ್ಲೆ ಇದು. ಇದೇ ರೀತಿ ಐಟಿ ಕಚೇರಿ ಸ್ಥಳಾಂತರಕ್ಕೆ ಯತ್ನಿಸಿದಾಗ ಅದನ್ನು ಎಲ್ಲರೂ ಸೇರಿ ಹುಬ್ಬಳ್ಳಿಯಲ್ಲಿ ತಡೆದಿದ್ದಾರೆ. ಹಾಗಿರುವಾಗ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಪಕ್ಷದ ಶಾಸಕರು, ಸಂಸದರು ಇರುವಾಗ ಅವರಿಗೆ ಯಾಕೆ ಕಚೇರಿ ಸ್ಥಳಾಂತರ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಖಾದರ್ ಪ್ರಶ್ನಿಸಿದರು.
ಕೇಂದ್ರ ವಿತ್ತ ಸಚಿವರು ಕೂಡ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಕರಾವಳಿಯ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ ಈಗ ಐಟಿ ಕಚೇರಿ ಸ್ಥಳಾಂತರಕ್ಕೆ ಯತ್ನಿಸಲಾಗುತ್ತಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿ ಅದಾನಿ ಗುಂಪಿಗೆ ಹಸ್ತಾಂತರಿಸಲಾಗುತ್ತಿದೆ. ಅದೇ ರೀತಿ ಎನ್‌ಎಂಪಿಟಿಯನ್ನೂ ಖಾಸಗಿ ತೆಕ್ಕೆಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.