×
Ad

ಬಿಜೆಪಿಯಿಂದ ದ.ಕ. ಜಿಲ್ಲೆಯ ಆರ್ಥಿಕ ವ್ಯವಸ್ಥೆ ಸರ್ವನಾಶ: ಜೆ.ಆರ್. ಲೋಬೊ ಆರೋಪ

Update: 2020-09-05 17:41 IST

ಮಂಗಳೂರು, ಸೆ.5: ಅಭಿವೃದ್ಧಿಯ ಪಥದಲ್ಲಿದ್ದ ದ.ಕ.ಜಿಲ್ಲೆಯ ಆರ್ಥಿಕ ವ್ಯವಸ್ಥೆಯನ್ನು ಬಿಜೆಪಿಯು ಸರ್ವನಾಶ ಮಾಡುತ್ತಿದ್ದು, ಇದೀಗ ಅದಕ್ಕೆ ಪೂರಕವಾಗಿ ಮಂಗಳೂರಿನ ಐಟಿ ಕಚೇರಿ ವಿಭಾಗವನ್ನೇ ಗೋವಾ ಕಚೇರಿಯೊಂದಿಗೆ ವಿಲೀನಕ್ಕೆ ಮುಂದಾಗುವ ಮೂಲಕ ಮತ್ತಷ್ಟು ಹೊಡೆತ ನೀಡುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀನಿವಾಸ ಮಲ್ಯರಿಂದ ಆದಿಯಾಗಿ ದ.ಕ. ಜಿಲ್ಲೆಯಲ್ಲಿ ಟಿಎಂಎ ಪೈ, ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ಜಾರ್ಜ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿಯಂತಹ ಜನಪ್ರತಿನಿಧಿಗಳು ಅಭಿವೃದ್ದಿಗೆ ಪೂರಕ ವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಬಿಜೆಪಿ ಸರಕಾರ ನಗರದ ಅಭಿವೃದ್ಧಿಗೆ ಪೂರಕವಾಗಿದ್ದ ಐಟಿ ಕಚೇರಿಯನ್ನೇ ಸ್ಥಳಾಂತರಿಸುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲೆಯ ಪ್ರಮುಖ ಬ್ಯಾಂಕ್‌ಗಳಾಗಿದ್ದ ವಿಜಯಾಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸಿಂಡೀಕೇಟ್ ಬ್ಯಾಂಕ್ ಮೊದಲಾದವುಗಳನ್ನು ವಿಲೀನಗೊಳಿಸಿ ಹಿರಿಯರು ಕಟ್ಟಿ ಬೆಳೆಸಿದ ವಾಣಿಜ್ಯ ಕೇಂದ್ರಗಳನ್ನೇ ಸಂಪೂರ್ಣ ನಾಶ ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಬದಲು ಅದನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ಮಂಗಳೂರು- ಬೆಂಗಳೂರು ನಡುವಿನ ಪ್ರಯಾಣವನ್ನು ಅತ್ಯಂತ ಕಡಿಮೆಗೊಳಿಸುವ ಸುರಂಗ ಮಾರ್ಗದ ಬಗ್ಗೆ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್‌ರವರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ಹುಸಿಗೊಳಿಸಲಾಗಿದೆ. ಯುವ ಜನರಿಗೆ ಉದ್ಯೋಗ ನೀಡುತ್ತಿಲ್ಲ. ಪ್ಲಾಸ್ಟಿಕ್ ಪಾರ್ಕ್ ಮಾಡುವ ಭರವಸೆ ಏನಾಯಿತು?  ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ದ.ಕ. ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ನಾಯಕರಾದ ಪ್ರಭಾಕರ ಶ್ರೀಯಾನ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್‌ದಾಸ್, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News