×
Ad

ರೈತರು ಸಂಘಟಿತರಾಗಬೇಕಿದೆ: ಯಾದವ್ ಶೆಟ್ಟಿ

Update: 2020-09-05 17:42 IST

ಮಂಗಳೂರು, ಸೆ.5: ಕೇಂದ್ರ, ರಾಜ್ಯ ಸರಕಾರಗಳು ರೈತ, ಕಾರ್ಮಿಕರ ವಿರೋಧಿಯಾಗಿದ್ದು ಭೂಮಸೂದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಮೂಲಕ ದೌರ್ಜನ್ಯ ಮಾಡಲು ಹೊರಟಿದೆ. ಇದರ ವಿರುದ್ಧ ರೈತರು ಸಂಘಟಿತರಾಗದಿದ್ದರೆ ದೇಶಕ್ಕೆ ಅಪಾಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಹೇಳಿದರು.

ನಗರದ ಮಿನಿಸೌಧದ ಎದುರು ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ವತಿಯಿಂದ ಶನಿವಾರ ನಡೆದ ಐಕ್ಯ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶವನ್ನಾಳುವವರು ಖಾಸಗೀಕರಣ ಜಪ ಮಾಡುತ್ತಿದ್ದಾರೆ. ಎಪಿಎಂಸಿ, ಶಿಕ್ಷಣ, ಆರೋಗ್ಯ, ರೈಲು, ವಿಮಾನ, ವಿದ್ಯುತ್ ಸೇರಿದಂತೆ ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ದೇಶವನ್ನು ಕಟ್ಟಿದ ರೈತ-ಕಾರ್ಮಿಕ, ಕೂಲಿಕಾರರ ಬದುಕಿಗೆ ಭದ್ರತೆಯಿಲ್ಲ. ಸರಕಾರ ಕೂಡಲೇ ಕೋವಿಡ್ ಪರೀಕ್ಷೆಗೊಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು, 6 ತಿಂಗಳವರೆಗೆ ಮಾಸಿಕ ರೂ.7500 ಪರಿಹಾರ ನೀಡಬೇಕು, ಕುಟುಂಬದ ಪ್ರತಿ ಸದಸ್ಯನಿಗೆ 10ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು, ಉದ್ಯೋಗ ಖಾತ್ರಿ ವೇತವನ್ನು ಕನಿಷ್ಠ 600ರೂ.ಗೆ ಹೆಚ್ಚಿಸಬೇಕು, ನಗರ ಪ್ರದೇಶಕ್ಕೆ ವಿಸ್ತರಿಸಬೇಕು, ಕನಿಷ್ಠ 200ದಿನಗಳಿಗೆ ಹೆಚ್ಚಿಸಬೇಕು, ಖಾಶಗಿಕರಣ ಪ್ರಕ್ರಿಯೆ ತಡೆಬೇಕು, ಭೂಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಷೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯುವ ಮುಖಂಡರಾದ ವಸಂತ್ ಆಚಾರ್, ಲೋಕಯ್ಯ, ಸುಂದರ್ ಶೆಟ್ಟಿ, ವಾಸುದೇವ ಉಚ್ಚಿಲ್, ಸದಾಶಿವದಾಸ್, ರಮಣಿ ಮೂಡುಬಿದಿರೆ, ರಾಧಾ ಮೂಡುಬಿದಿರೆ, ರಾಮಣ್ಣ ವಿಟ್ಲ, ಜಯಂತ ಅಂಬ್ಲಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News