×
Ad

ಮರಳಿನ ಅಲಭ್ಯತೆ ಪರಿಹರಿಸದಿದ್ದರೆ ಪ್ರತಿಭಟನೆ : ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್ ಎಚ್ಚರಿಕೆ

Update: 2020-09-05 17:44 IST

ಮಂಗಳೂರು, ಸೆ.5: ಕರಾವಳಿ ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯಗಳಿಗೆ ಉಪಯೋಗಿಸುವ ಮರಳಿನ ಅಲಭ್ಯವಿದ್ದು, ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಮುಂದಿನ ಹತ್ತು ದಿನಗಳಲ್ಲಿ ಬೇಡಿಕೆ ಈಡೇರದ್ದಿರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳೂರು ಸಿವಿಲ್ ಕಾಂಟ್ರಾಕ್ಟರ್ಸ್‌ ಎಸೋಸಿಯೇಶನ್ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮತ್ತು ಮರಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಕಳೆದ ಅನೇಕ ತಿಂಗಳುಗಳಿಂದ ನಿರ್ಮಾಣ ಕಾರ್ಯಗಳಿ ಸ್ಥಗಿತಗೊಂಡಿವೆ. ಇದರಿಂದಾಗಿ ಕಾರ್ಮಿಕರು, ಗುತ್ತಿಗೆದಾರರು, ಸಂಬಂಧ ಪಟ್ಟ ವ್ಯಾಪಾರಸ್ಥರು ತಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಈ ಬಗ್ಗೆ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರೂ ಅದು ಫಲಪ್ರದವಾಗದೇ ಇರುವುದು ಖೇದಕರ ಎಂದು ಹೇಳಿದರು.

ಮರಳಿನ ಸಮಸ್ಯೆ ಪರಿಹಾರವಾಗದೇ ಪ್ರತೀ ವರ್ಷ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ರಾಯಧನ ಕೂಡ ಸೇರುತ್ತಿಲ್ಲ. ಅಕ್ರಮ ಮರಳುಗಾರಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಕ್ರಮಬದ್ಧವಾಗಿ ಗಣಿಗಾರಿಕೆ ಪರವಾನಗಿ ಇದ್ದರೂ ಮರಳು ಗಾರಿಕೆ ಮಾಡಲಾಗದೆ ಅನುಮತಿ ನವೀಕರಣದ ನೆಪದಲ್ಲಿ ದಿನದೂಡಿ ಜಿಲ್ಲಾಡಳಿತವು ಮರಳಿನ ಕೃತಕ ಅಭಾವಕ್ಕೆ ಎಡೆಮಾಡಿಕೊಡುತ್ತಿದೆ ಎಂದರು.

ನಿರ್ಮಾಣ ಕಾರ್ಯಗಳಿಗೆ ಬಳಕೆ ಮಾಡುವಂತಹಾ ಮರಳನ್ನು ಹತ್ತು ದಿನಗಳ ಒಳಗೆ ಕ್ರಮಬದ್ಧವಾಗಿ ಒಂದು ಘ.ಅಡಿಗೆ 30 ರೂ. ದರದಲ್ಲಿ ನಿಗದಿ ಪಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಇದಕ್ಕೆ ಕ್ರೆಡಾಯ್, ಎಸಿಸಿಇ, ಕೆನರಾ ಬಿಲ್ಡರ್ಸ್‌ ಎಸೋಸಿಯೇಶನ್ ಸಹಕಾರವಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸೋಸಿಯೇಶನ್ ಉಪಾಧ್ಯಕ್ಷ ದಿನಕರ ಸುವರ್ಣ, ಕಾರ್ಯದರ್ಶಿ ರಾಮಕೃಷ್ಣ ರಾವ್, ಜತೆ ಕಾರ್ಯದರ್ಶಿ ಅಶೋಕ್ ಕುಲಾಲ್, ಖಜಾಂಚಿ ಸುರೇಶ್ ಜೆ. ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News